ಚಮೋಲಿ: ಚಮೋಲಿ ಜಿಲ್ಲೆಯ ಜೋಷಿಮಠದ ಬಳಿ ನಡೆದ ಹಿಮಸ್ಫೋಟದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ. ಉಪಗ್ರಹಗಳಿಂದ ತೆಗೆದ ಛಾಯಾಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಇಸ್ರೋ ಬಿಡುಗಡೆ ಮಾಡಿದ ಫೋಟೋ ಒಂದರಲ್ಲಿ ದೌಲಿ ಗಂಗಾ ಪ್ರದೇಶದಲ್ಲಿ ನೀರ್ಗಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಂಡಿವೆ. ಮತ್ತೊಂದು ಚಿತ್ರದಲ್ಲಿ ಪ್ರವಾಹದಿಂದ ತಪೋವನ ಜಲವಿದ್ಯುತ್ ಸ್ಥಾವರದ ಅಣೆಕಟ್ಟಿಗೆ ಉಂಟಾದ ಹಾನಿಯ ಬಗ್ಗೆ ನೋಡಬಹುದು. ಈ ಪ್ರವಾಹದಲ್ಲಿ ಎರಡು ಸೇತುವೆಗಳು ಕೊಚ್ಚಿ ಹೋಗಿರುವುದನ್ನೂ ಚಿತ್ರಗಳಲ್ಲಿ ಕಾಣಬಹುದು. ಭಗ್ನಾವಶೇಷಗಳು ಮತ್ತು ಬಂಡೆಗಲ್ಲುಗಳು ಸ್ಥಳದಲ್ಲಿ ತುಂಬಿಕೊಂಡಿವೆ. ಈ ಫೋಟೋಗಳನ್ನು ಕಾರ್ಟೋಸ್ಯಾಟ್-3 ಭೂ ಗ್ರಹಿಕಾ ಉಪಗ್ರಹವನ್ನು ಬಳಸಿ ಸೆರೆಹಿಡಿಯಲಾಗಿದೆ.

ಇನ್ನು, ಪ್ರವಾಹ ಪೀಡಿತ ಹಳ್ಳಿಗಳಿಗೆ ಪಡಿತರ ಕಿಟ್ ಗಳನ್ನು ವಿತರಿಸಲಾಗಿದೆ. ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ. ಸುರಂಗದಲ್ಲಿ ತಾಪಮಾನ 2 ಡಿಗ್ರಿಗಿಂತಲೂ ಕಡಿಮೆಯಿದೆ. ಹೀಗಾಗಿ ಅಲ್ಲಿ ಸಿಲುಕಿರುವವರನ್ನು ಆದಷ್ಟು ಬೇಗ ರಕ್ಷಿಸದಿದ್ದರೆ ಅನಾಹುತ ಆಗಲಿದೆ. ಸುರಂಗದಲ್ಲಿ ಕೆಸರು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ. ಕೆಸರನ್ನು ತೆರವುಗೊಳಿಸುವಲ್ಲಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.