ಇದು ಅಂತಿಂಥ ಕಾಡಲ್ಲ: ವಿಶ್ವದಲ್ಲಿಯೇ ಅತಿಹೆಚ್ಚು ಆತ್ಮಹತ್ಯೆಗಳು ನಡೆಯುವ ಕಾಡು..!

ಬೆಂಗಳೂರು: ಕಾಡು ಸುತ್ತುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನನಿತ್ಯದ ಜಂಜಾಟದಿಂದ ದೂರವಾಗಿ ನೆಮ್ಮದಿ ಕಂಡುಕೊಳ್ಳಲು ಅದೆಷ್ಟೋ ಮಂದಿ ಕಾಡು ಸುತ್ತಲು ತೆರಳುತ್ತಾರೆ. ಆದರೆ ಮನಸ್ಸಿಗೆ ನೆಮ್ಮದಿ ಕೊಡುವ ಸ್ಥಳವೇ ಜೀವ ತೆಗೆಯುವಂತಾದರೆ? ಹೌದು, ಇದು ವಿಚಿತ್ರವೆನಿಸಿದರೂ ಸತ್ಯ.
ಜಪಾನಿನಲ್ಲಿರುವ ಕಾಡೊಂದು ಸೂಸೈಡ್ ಕಾಡೆಂತಲೇ ಕುಖ್ಯಾತಿ ಪಡೆದಿದೆ. ಜಪಾನಿನಲ್ಲಿರುವ ಈ ದಟ್ಟ ಕಾಡು ಭಯಾನಕ. ಈ ಕಾಡಿನ ಹೆಸರು ಅಕಿಗಹರಾ, ಆದರೆ ಈ ಹೆಸರಿಗಿಂತಲೂ ಹೆಚ್ಚಾಗಿ ಗುರ್ತಿಸಿಕೊಂಡಿದ್ದು ಸೂಸೈಡ್ ಕಾಡೆಂತಲೇ. ಟೋಕಿಯೋದಿಂದ ಎರಡು ಗಂಟೆ ಪ್ರಯಾಣ ಮಾಡಿದರೆ ಈ ಕಾಡು ಸಿಗುತ್ತದೆ. ವಿಶ್ವದಲ್ಲಿಯೇ ಅತಿಹೆಚ್ಚು ಆತ್ಮಹತ್ಯೆ ನಡೆಯುವ ಕಾಡು ಎಂಬ ಕುಖ್ಯಾತಿ ಈ ಕಾಡಿಗೆ. ಈ ಕಾನನದೊಳಗೆ ಪ್ರವೇಶಿಸುವುದು ಸುಲಭ. ಆದರೆ ಚಕ್ರವ್ಯೂಹದಂತಿರುವ ಕಾಡಿನೊಳಗೆ ಒಮ್ಮೆ ಹೋದರೆ ಸಾಕು ಜೀವಂತವಾಗಿ ಹೊರಬಂದವರು ಬಹಳ ವಿರಳ. ಫ್ಯೂಜಿ ಪರ್ವತ ಶ್ರೇಣಿಯಲ್ಲಿರುವ ಈ ಕಾಡಿನಲ್ಲಿ ಇದುವರೆಗೂ ಲೆಕ್ಕಕ್ಕೆ ಸಿಗದಷ್ಟು ಜನ ಸಾವಿಗೀಡಾಗಿದ್ದಾರೆ. ಕೆಲವರದ್ದು ಆಕಸ್ಮಿಕ ಸಾವಾದರೆ ಮತ್ತಷ್ಟು ಜನರದ್ದು ಆತ್ಮಹತ್ಯೆ. ಹೀಗೆ ಈ ಕಾಡಿನಲ್ಲಿ ಪ್ರಾಣ ಕಳೆದುಕೊಂಡವರು ಇಲ್ಲಿ ಪ್ರೇತಾತ್ಮಗಳಾಗಿದ್ದಾರೆ. ಹೀಗಾಗಿ ಕಾಡು ಭಯಾನಕವೆನಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಕಾಡಿನಲ್ಲಿ ವಿವಿಧ ಬಗೆಯ ಬೃಹದಾಕಾರದ ಮರಗಳಿರುವುದರಿಂದ ಈ ಕಾಡನ್ನು ಕೆಲವರು ಮರಗಳ ಸಮುದ್ರವೆಂತಲೂ ಕರೆಯುತ್ತಾರೆ. ಅಕಿಗಹರಾ ಕಾಡಿನಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುವುದರಿಂದ ಕಾಡಿನ ಪ್ರವೇಶದ ಹಾದಿಯುದ್ದಕ್ಕೂ ನಿಮ್ಮ ಜೀವ ಅಮೂಲ್ಯವಾದುದು, ನಿಮ್ಮದು ಮೌಲ್ಯಯುತವಾದ ಜೀವ ಎಂಬಿತ್ಯಾದಿ ಫಲಕಗಳನ್ನು ಹಾಕಲಾಗಿದೆ.