ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಆವರಣದಲ್ಲಿ ನಿಲ್ಲಿಸಿದ್ದ ಎರಡು ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾರ್ವೆಬಾವಿಪಾಳ್ಯದ ಸಾಗರ್ ತಾಪ (19),ಬಂಡೆಪಾಳ್ಯದ ನವೀನ್ ಕಾಳಪ್ಪ (22), ಶ್ರೀಧರ್ ಗೌಡ (20)ನನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲಕಾರಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಹಾಗೂ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ಜತೆಗೆ ರೌಡಿಶೀಟರ್ ಕೇಬಲ್ ಸೋಮಶೇಖರ್ ಎಂಬಾತ ಕೃತ್ಯದ ಪ್ರಮುಖ ಸೂತ್ರಧಾರಿ ಎಂಬ ಸುದ್ದಿಯೂ ಹರಿದಾಡುತ್ತಿತ್ತು.
ಆರೋಪಿಗಳು ಈ ಬಗ್ಗೆ ಸಣ್ಣ ಸುಳಿವು ನೀಡಿದ್ದರು. ಹೀಗಾಗಿ, ಈ ಎಲ್ಲ ಮಜಲುಗಳಲ್ಲೂ ತನಿಖೆ ನಡೆಸಬೇಕಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.