ರಾಜ್ಯದ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರವು ಸಿ.ಎಂ ಉದಾಸಿ ಅವರ ನಿಧನದಿಂದ ತೆರವಾಗಿದ್ದರೆ, ಎಂ.ಸಿ.ಮನಗೂಳಿ ಅವರ ನಿಧನದಿಂದ ಸಿಂಧಗಿ ಕ್ಷೇತ್ರ ತೆರವಾಗಿತ್ತು. ಇದೀಗ ರಾಜ್ಯದ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಅಕ್ಟೋಬರ್ 1ರಂದು ಉಪಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ಅಕ್ಟೋಬರ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅ. 11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಅ.30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಉಪ ಚುನಾವಣೆಯ ದಿನಾಂಕ ಘೋಷಣೆಯಾದಿದ್ದರೂ ಮೂರು ಪಕ್ಷಗಳು ಉಪ ಸಮರಕ್ಕೆ ಮುಂಚಿನಿಂದಲೂ ಕಸರತ್ತು ನಡೆಸಿಕೊಂಡು ಬಂದಿದೆ. ಇದೀಗ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಮತ್ತಷ್ಟು ಕಾವೇರಲಿದೆ.