ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ: ಸಿಎಂ ಯಡಿಯೂರಪ್ಪ

ದಾವಣಗೆರೆ: ಮಾರ್ಚ್ ಮೊದಲ ವಾರ ಬಜೆಟ್ ಮಂಡನೆ ಮಾಡುವ ಚಿಂತನೆಯಿದೆ. ಇತಿಮಿತಿಯಲ್ಲಿ ಬಜೆಟ್ ಮಂಡನೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾತನಾಡಿದ ಸಿಎಂ ಬಿಎಸ್ವೈ, ಸೋಮವಾರದಿಂದ ಬಜೆಟ್ ಸಿದ್ಧತೆ ಪ್ರಾರಂಭವಾಗಿದೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಬಹುಪಾಲು ಮಾರ್ಚ್ ಮೊದಲ ವಾರ ಮಂಡನೆ ಮಾಡಲಾಗುವುದು. ಎರಡು ದಿನದಲ್ಲಿ ಬಜೆಟ್ ದಿನಾಂಕ ತಿಳಿಸುತ್ತೇನೆ ಎಂದರು.
ಈ ಬಾರಿ ಹಣಕಾಸಿನ ಇತಿಮಿತಿಯೊಳಗೆ ಉತ್ತಮ ಬಜೆಟ್ ಮಂಡನೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ತಿಂಗಳಿನಿಂದ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡಿದೆ. ಬರುವ ದಿನಗಳಲ್ಲಿ ತೆರಿಗೆ ಸಂಗ್ರಹ ಮತ್ತಷ್ಟು ಸುಧಾರಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಕುರುಬ ಸಮುದಾಯಕ್ಕೆ ಎಸ್ಟಿ ಬೇಡಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.