ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ದರಾಗುತ್ತಿದ್ದು, ಜುಲೈ 5ರಂದು ಪ್ರತಿಭಟನೆ ನಡೆಸಲು ದಿನಾಂಕ ರೂಪಿಸಿತ್ತು. ಇದರ ಸುಳಿವು ಪಡೆದ ಬೆನ್ನಲ್ಲೇ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಸಾರಿಗೆ ನೌಕರರು ಮುಷ್ಕರ ಮಾಡದಂತೆ ಸರ್ಕಾರ ಆದೇಶ ನೀಡಿದೆ. ಜುಲೈ 5ರ ನಂತರ ಸಾರಿಗೆ ನೌಕರರು ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಜುಲೈ 1ರಿಂದ ಡಿ.31ರವರೆಗೆ ಸಾರಿಗೆ ನೌಕರರ ಮುಷ್ಕರ ಮಾಡದಂತೆ ಅಧಿಸೂಚನೆ ಹೊರಡಿಸಿದೆ.
ಕೋವಿಡ್ ನಿಂದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ.ಆದ್ರಿಂದ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3 ರ ಉಪವಿಭಾಗ 1 ರ ಅನ್ವಯ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ. ಈಗಾಗಲೇ ಸಾರಿಗೆ ಇಲಾಖೆಗೆ 4000 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಹಾಗಾಗಿ ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ ಮಾಡದಂತೆ ಸರ್ಕಾರ ಆದೇಶಿಸಿದೆ.