ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ 60 ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ: ಸಚಿವ ನಾರಾಯಣಗೌಡ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‍ನಲ್ಲಿ ಸುಸಜ್ಜಿತ ವಸತಿ ನಿಲಯ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ನಿರ್ಮಾಣವಾಗಲಿದೆ. 60 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಲಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು, ತಕ್ಷಣವೇ ಟೆಂಡರ್ ಆಹ್ವಾನಿಸಿ ಮಾರ್ಚ್ ಒಳಗೆ ಭೂಮಿ ಪೂಜೆ ನಡೆಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಸಚಿವ ಡಾ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ವಸತಿ ನಿಲಯ ನಿರ್ಮಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು. ಸಚಿವರು ಸಭೆ ನಡೆಸಿ, ವಸತಿ ನಿಲಯ ನಿರ್ಮಾಣಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಿ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ಮುಂದಿನ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದು, ಮಾರ್ಚ್ ಒಳಗೆ ಎಲ್ಲ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪ್ರಸಕ್ತ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಒದಗಿಸಿರುವ ಅನುದಾನದ ಪ್ರಗತಿಯನ್ನು ಪರಿಶೀಲಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ಬಳಿಕ ಇದುವರೆಗೆ 5348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 2020-21 ನೇ ಸಾಲಿನಲ್ಲಿ 1131 ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಇತರೆ ಇಲಾಖೆಗಳು ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ ಹೆಚ್ಚಿನ ಅನುದಾನ ಈ ಭಾಗಕ್ಕೆ ನೀಡಲಾಗುತ್ತಿದ್ದರು ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾರ್ಯಗಳು ಆಗದೇ ಇರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಮಂಜೂರಾದ 4016 ಕಾಮಗಾರಿಗಳಲ್ಲಿ ಇದುವರೆಗೆ 2176 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 401 ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ. ಕೂಡಲೆ ಈ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಈ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಪಣತೊಟ್ಟಿದ್ದಾರೆ. ಹೀಗಿರುವಾಗ ಹಂಚಿಕೆಯಾದ ಅನುದಾನ 100 ರಷ್ಟು ಬಳಕೆಯಾಗಬೇಕು. ಸರ್ಕಾರ ಒದಗಿಸುವ ಅನುದಾನದಲ್ಲಿ ಸಾಮಾಜಿಕ ಕಲ್ಯಾಣದ ಜೊತೆಗೆ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅಂದರೆ ವಿಮಾನ ನಿಲ್ದಾಣ, ರೇಲ್ವೆ ಸಂಪರ್ಕ, ಭೂ ಹೆದ್ದಾರಿಗಳು, ಹೈಟೆಕ್ ಆಸ್ಪತ್ರೆಗಳ ನಿರ್ಮಾಣ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಅತ್ಯಾಧುನಿಕ ಮಾರುಕಟ್ಟೆ ಈ ರೀತಿಯ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಸಚಿವರು ಸೂಚಿಸಿದರು. ಕಳೆದ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಕೇವಲ 5 ಕೊಟಿ ರೂ. ಅನುದಾನ ಮಾತ್ರ ಬಳಕೆಯಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್ ಒಳಗೆ ಶೇ. 100 ರಷ್ಟು ಅನುದಾನ ಬಳಕೆ ಆಗಬೇಕು ಎಂದು ಸಚಿವರು ಖಡಕ್ಕಾಗಿ ಸೂಚನೆ ನೀಡಿದರು.
ಇದೆ ವೇಳೆ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಪ್ರಮುಖ ವ್ಯವಸಾಯದಲ್ಲಿ ಪರಿಣಿತಿ ಹೊಂದಿರುವ ರಾಜ್ಯದ ಮಾದರಿ ರೈತರನ್ನ ಗುರುತಿಸಿ, ಅವರಿಂದ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಅಗತ್ಯ ತರಬೇತಿ ಕೊಡಿಸುವ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯವಿರುವ ಕ್ರೀಯಾಯೋಜನೆ ಸಿದ್ದಪಡಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಇಲಾಖೆಯ ಹೆಚ್ಚವರಿ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರಾದೇಶಿಕ ಆಯುಕ್ತರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಎನ್. ವಿ. ಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.