ಕಾಂಗ್ರೆಸ್ ನಾಯಕರು ಪಾಪದ ಮೂಟೆ ಹೊರಬೇಕಿದೆ, ವ್ಯಾಕ್ಸಿನ್ ವಿಚಾರವಾಗಿ ಸಾಕಷ್ಟು ಅಪಪ್ರಚಾರ ಮಾಡಿದ್ದರು. ಈಗ ಅವರ ಮನೆಯವರೇ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಕೊರೊನಾ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಂತಹ ಧುರೀಣರು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಜನರಿಗೆ ಎಲ್ಲವೂ ಗೊತ್ತಾಗಿದೆ. ಹಾಗಾಗಿ ಜನರೇ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಾವು ನೋವು ಆಗಲು ಕಾಂಗ್ರೆಸ್ಸಿಗರ ಅಪಪ್ರಚಾರ ಕಾರಣ ಎಂದು ಆರೋಪ ಮಾಡಿದ್ರು. ಇನ್ನೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರದಿ ವಿಚಾರವಾಗಿ ಮಾತನಾಡಿ ನಾನು ಯಾವುದೇ ರಾಜಕೀಯ ವಿಚಾರ ಮಾತನಾಡಬಾರದು ಅಂತಾ ತೀರ್ಮಾನ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಅರುಣ್ ಸಿಂಗ್ ಜೊತೆಗೆ ಚರ್ಚೆ ಮಾಡಿರುವ ವಿಚಾರ ಮಾಧ್ಯಮದ ಮುಂದೆ ಮಾತನಾಡಲ್ಲ, ಅವರು ಕೊಟ್ಟಿರುವ ವರದಿ ನನಗೆ ಗೊತ್ತಿಲ್ಲ, ಮೂರು ಜನರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ವಿಚಾರ ಅದರ ಬಗ್ಗೆ ನನಗೆ ಗೊತ್ತಿಲ್ಲ ಪಾರ್ಟಿ ಏನ್ ಮಾಡಲಿದೆಯೋ ಅಂತಾ ನನಗೆ ಗೊತ್ತಿಲ್ಲ, ಆದರೆ ಇನ್ನು ಎರಡ್ಮೂರು ದಿನ ಕಾದು ನೋಡ್ತೇನೆ ಅಂತಾ ಯೋಗೀಶ್ವರ್ ಹೇಳಿದರು.