ನಾಡು ನುಡಿಯ ಸೇವೆಗಾಗಿ ಕಸಾಪದ ಪರಿಚಾರಕನಾಗಿ ಕೆಲಸ ಮಾಡುವೆ: ಡಾ. ಮಹೇಶ್ ಜೋಶಿ

ಗದಗ: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನಾಡಿನ ಸಾಹಿತ್ಯ, ಸಂಸ್ಕೃತಿ, ನೆಲ ಜಲದ ಸೇವೆ ಮಾಡುವುದಕ್ಕೆ ಪ್ರಾಮಾಣಿಕ ಸೇವೆಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ನನ್ನನ್ನು ಬೆಂಬಲಿಸಿ ಎಂದು ಡಾ. ಮಹೇಶ್ ಜೋಶಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಕೆಲವು ಕನಸಿನ ಯೋಜನೆಗಳ ಮೂಲಕ 16 ಅಂಶಗಳ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ. ಅವುಗಳಲ್ಲಿ ಅಜೀವ ಸದಸ್ಯರ ಶುಲ್ಕವನ್ನು ಕಡಿಮೆ ಗೊಳಿಸುವುದು, ಸದಸ್ಯತ್ವ ಪಡೆಯುವ ವಿಧಾನವನ್ನು ಸರಳಿಕರಣಗೊಳಿಸವುದು, ಕಸಾಪ ಚಟುವಟಿಕೆಗಳನ್ನು ಸಂಪೂರ್ಣ ಪಾರದರ್ಶಕ ಮಾಡುವುದು, ಕಸಾಪ ವ್ಯಾಪ್ತಿಯನ್ನು ಹಳ್ಳಿಗಳಿಗೂ ವಿಸ್ತರಿಸುವುದು, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು, ಕನ್ನಡ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳುವುದು, ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.
ಕಸಾಪ ನಿಬಂಧನೆಗಳ ಪರಿಷ್ಕರಣೆ ಮತ್ತು ತಿದ್ದುಪಡಿ, ಹೊಸ ಪ್ರತಿಭೆಗಳನ್ನು ಗುರುತಿಸಲಿ ಪ್ರೋತ್ಸಾಹಿಸುವುದು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸರ್ವಾಧ್ಯಕ್ಷರ ಸ್ಥಾನಮಾನ, ಎಲ್ಲಾ ತಾಲೂಕುಗಳಲ್ಲಿ ಕನ್ನಡ ಭವನಕ್ಕೆ ಆಧ್ಯತೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತರುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.