ತಿರುವನಂತಪುರ: ಕೇರಳದ 9 ವರ್ಷದ ಪೋರನೊಬ್ಬ ಒಂದು ಗಂಟೆಯಲ್ಲಿ 172 ವಿಧದ ಭಕ್ಷ್ಯಗಳನ್ನು ತಯಾರಿಸುವುದರ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾನೆ. ಹಯನ್ ಅಬ್ದುಲ್ಲಾ ತನಗೆ ನಾಲ್ಕು ವಯಸ್ಸಿದ್ದಾಗಲೇ ಅಡುಗೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಒಂದು ಗಂಟೆಯಲ್ಲಿ ಬಿರಿಯಾನಿ, ಜ್ಯೂಸ್, ಪ್ಯಾನ್ಕೇಕ್, ದೋಸೆಗಳು, ಚಾಕೋಲೇಟ್ಸ್ ಸೇರಿದಂತೆ ಒಟ್ಟು 172 ಬಗೆಯ ಖಾದ್ಯಗಳನ್ನು ತಯಾರಿಸಿ ಸಾಧನೆಗೈದಿದ್ದಾನೆ.
ಚೆನ್ನೈನ ಶೆರ್ವುಡ್ ಹಾಲ್ ಸೀನಿಯರ್ ಸೆಕೆಂಡರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಹಯಾನ್ ಕೊರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಈತ ಹಯಾನ್ ಡೆಲಿಕೇಟ್ಸ್ ಎಂಬ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾನೆ. ವಿವಿಧ ಅಡುಗೆಗಳ ಬಗ್ಗೆ ಇಂಗ್ಲೀಷ್, ಮಲಾಯಾಳಂ ಮತ್ತು ತಮಿಳು ಭಾಷೆಗಳಲ್ಲಿ ವಿವರಣೆ ದೊರೆಯುತ್ತದೆ, ತಾನು ಪೈಲಟ್ ಆಗಬೇಕೆಂಬುದು ಹಯಾನ್ ಮಹಾದಾಸೆಯಾಗಿದೆ. ಪಾಸ್ತಾ ಬಾರ್ ಸ್ಥಾಪಿಸಬೇಕೆಂಗು ಹಯಾನ್ ಕನಸಾಗಿದೆ.
ಮೊದಲಿನಿಂದಲೂ ಅಪ್ಪ- ಅಮ್ಮ ಅಡುಗೆ ಮಾಡುವುದನ್ನು ನೋಡುತ್ತಾ ಇದನ್ನು ಕಲಿತಿದ್ದೇನೆ. ಆದರೆ ರೆಕಾರ್ಡ್ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ವೇಗವಾಗಿ ಅಡುಗೆ ಮಾಡುವುದನ್ನು ನನ್ನ ಕುಟುಂಬ ಗಮನಿಸಿತು, ಆಗ ನಾನು ಅದರ ಮೇಲೆ ಏಕೆ ಕೆಲಸ ಮಾಡಬಾರದು ಮತ್ತು ಹೇಗ ವಿಭಿನ್ನವಾಗಿರಬೇಕೆಂದು ಯೋಚಿಸಿದೆ. ಹೀಗಾಗಿ ಈ ಸಾಧನೆ ಸಾಧ್ಯವಾಯಿತು ಎಂದು ಹಯಾನ್ ಹೇಳಿದ್ದಾನೆ.