ಬೆಂಗಳೂರಿನ ಬನಶಂಕರಿ ದೇವಾಲಯದ ಮುಂದೆ ಫೈನಾನ್ಸಿಯರ್ ಮದನ್ ಎಂಬುವರನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆಗೈದ ಪ್ರಕರಣದ 7 ಮಂದಿ ಆರೋಪಿಗಳು ವಕೀಲರ ವೇಷದಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಬೆಳಗ್ಗೆ 37ನೇ ಎಸಿಎಂಎಂ ಕೋರ್ಟ್ ಆವರಣದಲ್ಲಿ ವಕೀಲರ ಸೋಗಿನಲ್ಲಿ ಏಳು ಮಂದಿ ಆರೋಪಿಗಳು ಪ್ರತ್ಯಕ್ಷರಾಗಿದ್ದಾರೆ. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕೋರ್ಟ್ ಪ್ರವೇಶಕ್ಕೆ ಅನುಮತಿ ನಿರಾಕರಣೆ ಮಾಡಿದ್ದು ಆರೋಪಿಗಳಾದ ಮಹೇಶ್, ನವೀನ್, ಪ್ರದೀಪ್, ಚಂದ್ರಶೇಖರ್, ಮನೋಜ್, ಚಂದ್ರಶೇಖರ್ ಹಾಗೂ ಪ್ರಸಾದ್ ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದರು.
ಜುಲೈ 2 ರಂದು ಬನಶಂಕರಿ ಮೆಟ್ರೋ ಸ್ಟೇಷನ್ ಬಳಿ ಫೈನಾನ್ಸಿಯರ್ ಆಗಿದ್ದ ಲಕ್ಕಸಂದ್ರ ನಿವಾಸಿ ಮದನ್ನನ್ನು ಹಿಂಬಾಲಿಸಿ ಮೂರು ಬೈಕ್ನಲ್ಲಿ ಬಂದು ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಹತ್ಯೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಚನ್ನರಾಯಪಟ್ಟಣದ ರೌಡಿಶೀಟರ್ ಲಿಂಗನ ಕೊಲೆಗೆ ಮದನ್ ಫೈನಾನ್ಸ್ ಮಾಡಿದ್ದ ಎನ್ನಲಾಗುತ್ತಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಕೊಲೆ ಮಾಡಿ ಪೊಲೀಸರಿಗೆ ಸುಳಿವು ಸಿಗದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳು ಇಂದು ಬೆಳಗ್ಗೆ ಕೋರ್ಟ್ ಮುಂದೆ ವಕೀಲರ ವೇಷದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪೊಲೀಸರ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಈ ಪ್ಲ್ಯಾನ್ ಮಾಡಿಕೊಂಡಿದ್ದರಾ? ಎಂಬ ಅನುಮಾನ ವ್ಯಕ್ತವಾಗಿದೆ. ಕೋವಿಡ್ ನಿಯಮ ಪ್ರಕಾರ ಆರೋಪಿಗಳಿಗೆ ನ್ಯಾಯಾಲಯ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ಜಯನಗರ ಪೊಲೀಸರು ಸ್ಥಳದಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.