ಪುದುಚೆರಿ: ಕಿರಣ್ ಬೇಡಿ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಿರ್ಗಮಿಸಿದ್ದಾರೆ. ನಿರ್ಗಮನಗೊಂಡ ಬಳಿಕ ಕೇಂದ್ರ ಸರ್ಕಾರಕ್ಕೆ ಕಿರಣ್ ಬೇಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜಕಾರಣಕ್ಕೆ ಬರುವ ಮೊದಲು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪುದುಚೆರಿ ಮುಖ್ಯಮಂತ್ರಿ ಮತ್ತು ಕಿರಣ್ ಬೇಡಿ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಜಟಾಪಟಿ ನಡೆಯುತ್ತಿತ್ತು. ಈ ನಡುವೆ ಸರ್ಕಾರದ ವಿರುದ್ಧ ಬಂಡೆದ್ದು ಹಲವು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ನೂತನ ಲೆಫ್ಟಿನೆಂಟ್ ಗವರ್ನರ್ ನೇಮಕವಾಗುವವರೆಗೂ ತೆಲಂಗಾಣ ರಾಜ್ಯಪಾಲ ಡಾ.ತಮಿಳುಸಾಯಿ ಸುಂದರ್ ರಾಜನ್ ಅವರಿಗೆ ಹೆಚ್ಚುವರಿ ಹೊಣೆಯನ್ನು ವಹಿಸಿ ರಾಷ್ಟ್ರಪತಿಗಳು ಆದೇಶಿಸಿದ್ದಾರೆ.
ಪುದುಚೆರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಕೆಲಸ ಮಾಡಿ ಜೀವಮಾನದ ಅನುಭವ ಕೊಟ್ಟ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ಜೊತೆಗೆ ಕೆಲಸ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಸಾರ್ವಜನಿಕರ ಹಿತಾಸಕ್ತಿಗೆ ತಕ್ಕಂತೆ ಟೀಮ್ ರಾಜ್ ನಿವಾಸ್ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂದು ಮನಃಪೂರ್ವಕವಾಗಿ ಹೇಳುತ್ತೇನೆ ಎಂದು ನಿರ್ಗಮನದ ಬಳಿಕ ಕಿರಣ್ ಬೇಡಿ ಟ್ವೀಟ್ ಮೂಲಕ ತಮ್ಮ ಧನ್ಯವಾದ ಹೇಳಿದ್ದಾರೆ. ಅಲ್ಲದೇ, ಪುದುಚೆರಿಗೆ ಉಜ್ವಲ ಭವಿಷ್ಯವಿದ್ದು, ಆ ಭವಿಷ್ಯ ಜನರ ಕೈಯಲ್ಲಿದೆ ಎಂದಿದ್ದಾರೆ.
ಕಿರಣ್ ಬೇಡಿ ಅವರನ್ನು 2016ರಲ್ಲಿ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿತ್ತು. ಕಿರಣ್ ಬೇಡಿ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ನಾರಾಯಣ ಸ್ವಾಮಿ ಆರೋಪಿಸುತ್ತಿದ್ದರು. ಎರಡು ವರ್ಷಗಳ ಹಿಂದೆಯೇ ಕಿರಣ್ ಬೇಡಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಜಭವನದ ಮುಂದೆ ನಾರಾಯಣಸ್ವಾಮಿ ಧರಣಿ ಮಾಡಿದ್ದರು.