ಮಾರ್ಗ ಮಧ್ಯೆ ರೈಲು ನಿಂತಿದ್ದರಿಂದ ಮತ್ತೊಂದು ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಶತಾಬ್ಧಿ ರೈಲು ಹರಿದ ಪರಿಣಾಮ ಒಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ಬುಧವಾರ ಸಂಭವಿಸಿದೆ.
ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮಾರಿಕುಪ್ಪಂ-ಎಸ್ ಬಿಎಸ್ ಮತ್ತು ಕುಪ್ಪಂ ಮತ್ತು ಎಸ್ ಬಿಸಿ ರೈಲುಗಳು ಆಗಮಿಸಿದ್ದು, ವಿದ್ಯುತ್ ಕಡಿತದಿಂದ ಎರಡೂ ಬದಿ ಪ್ಯಾಸೆಂಜರ್ ರೈಲು ನಿಂತಿದ್ದವು.
ಪ್ರಯಾಣಿಕರು ರೈಲು ನಿಂತಿದ್ದರಿಂದ ಪಕ್ಕದ ಹಳಿ ಮೇಲೆ ನಿಂತು ಕಾಯುತ್ತಿದ್ದಾಗ ಇದೇ ಸಂದರ್ಭದಲ್ಲಿ ಮತ್ತೊಂದು ರೈಲು ಬರುತ್ತಿದ್ದು ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದರಿಂದ ಎಕ್ಸ್ ಪ್ರೆಸ್ ರೈಲು ಹರಿದು ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ವೇಗವಾಗಿ ನುಗ್ಗಿ ಬಂದಿದ್ದು, ಪ್ರಯಾಣಿಕರು ಬಚಾವ್ ಆಗಲು ಯತ್ನಿಸುವ ವೇಳೆಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಕೂಡ ಜನ ಹಳಿ ಮೇಲೆ ನಿಂತಿದ್ದರು. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.