ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಜ.30ರಿಂದ ಫೆ.1ರವರೆಗೆ ನಡೆಯುವ ಪ್ರಸಿದ್ಧ ಜಾತ್ರಾ ಮಹೋತ್ಸವಕ್ಕೆ ಗವಿಮಠ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಶ್ರೀಮಠದ ವಿದ್ಯುತ್ ದೀಪಾಲಂಕಾರ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಗವಿಮಠ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಈ ಸೌಂದರ್ಯಕ್ಕೆ ವಿದ್ಯುತ್ ಅಲಂಕಾರ ಮತ್ತಷ್ಟು ಮೆರಗು ನೀಡುತ್ತಿದೆ. ಶ್ರೀ ಮಠದ ವಿದ್ಯುತ್ ಅಲಂಕಾರ ನೋಡುವುದಕ್ಕಾಗಿಯೇ ಭಕ್ತ ಸಮೂಹ ಆಗಮಿಸುತ್ತಿದೆ. ವಿದ್ಯುತ್ ಅಲಂಕಾರಕ್ಕೆ ಮಾರು ಹೋಗುತ್ತಿರುವ ಭಕ್ತರು, ಕತೃ ಗದ್ದುಗೆ ದರ್ಶನ ಪಡೆದ ಬಳಿಕ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಗವಿಮಠದ ವಿದ್ಯುತ್ ಅಲಂಕಾರ ಜನಮೆಚ್ಚುಗೆಗೆ ಕಾರಣವಾಗುತ್ತಿದೆ. ಇನ್ನು, ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಅದ್ಧೂರಿಗೆಯಾಗಿ ನಡೆಯುತ್ತಿತ್ತು. ಜಾತ್ರೆಯ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ಜರುಗುತ್ತಿದ್ದವು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿರುವುದರಿಂದ ಜಾತ್ರಾ ಮಹೋತ್ಸವವನ್ನು ಮೂರು ದಿನಕ್ಕೆ ಸೀಮಿತಗೊಳಿಸಿದೆ. ಮೂರ್ನಾಲ್ಕು ಲಕ್ಷ ಭಕ್ತ ಸಮೂಹ ಸೇರುತ್ತಿದ್ದ ಮಹಾರಥೋತ್ಸವದಲ್ಲಿ, ಈ ಬಾರಿ ಎಷ್ಟು ಭಕ್ತರು ಸೇರುತ್ತಾರೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಗವಿಮಠದ ಮುಂಭಾಗದ ಬಾವಿ, ಪ್ರವೇಶ ದ್ವಾರ, ಶಿಲಾ ಮಂಟಪ, ಕತೃ ಗದ್ದುಗೆ, ಕೈಲಾಸ ಮಂಟಪ, ಮಠದ ಆವರಣ, ಮುಂಭಾಗದ ಕುಡಿಯುವ ನೀರಿನ ಟ್ಯಾಂಕ್, ಮಠಕ್ಕೆ ಹೊಂದಿಕೊಂಡಿರುವ ಕೆರೆ, ದಾಸೋಹ ವ್ಯವಸ್ಥೆ , ಶ್ರೀ ಶಿವಶಾಂತ ವೀರ, ಮರಿಶಾಂತವೀರ, ಅನ್ನಪೂರ್ಣೇಶ್ವರ ದೇವಾಲಯ, ಮಠದ ಆವರಣದ ಗಿಡ, ಮರಗಳು ಸೇರಿದಂತೆ ನಾನಾ ಕಡೆಗಳಲ್ಲಿ ವಿದ್ಯುತ್ ಅಲಂಕಾರಗೊಳಿಸಿದೆ. ಬೆಟ್ಟದ ಮೇಲಿರುವ ಗವಿಮಠ, ದೂರದಿಂದಲೇ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದು ವಿದ್ಯುತ್ ಅಲಂಕಾರ ನೋಡಿ ಮನ ತಣಿಸಿಕೊಳ್ಳುತ್ತಿದ್ದಾರೆ.
0 106 1 minute read