ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯುತ್ತದೆ. 6 ನೇ ವೇತನ ಜಾರಿಗೆ ತರುತ್ತೇವೆ ಅಂತ ಹೇಳಿದ ಸರ್ಕಾರ ಈಗ ಉಲ್ಟಾ ಹೊಡೆದಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡದೇ ನಮ್ಮ ನೌಕರರು ಸತ್ಯಾಗ್ರಹ ಮಾಡಿದ್ದಾರೆ. ಸರ್ಕಾರ ಎಸ್ಮಾ ಜಾರಿ ಮಾಡುವ ಸನ್ನಿವೇಶ ಬರುವುದಿಲ್ಲ. ಕಾರಣ ನಾವು ನೋಟಿಸ್ ನೀಡಿಯೇ ಮುಷ್ಕರ ಮಾಡಿದ್ದೀವಿ. ಮುಖ್ಯಮಂತ್ರಿ ಆಗಲಿ ಸಚಿವರಾಗಲಿ ನಮ್ಮನ್ನು ಕರೆದು ಮಾತುಕತೆ ನಡೆಸಿಲ್ಲ ಎಂದರು.
ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ವಕ್ತಾರನಂತೆ ಮಾತನಾಡಿದ್ದಾರೆ. ಕಾರಣ ಕೊಟ್ಟು ಎಸ್ಮಾ ಜಾರಿಗೊಳಸಲಿ. ಖಾಸಗಿ ಸವಾರರಿಗೂ ಮನವಿ ಮಾಡಿದ್ದೇವೆ. ಮಾರ್ಚ್ ತಿಂಗಳ ವೇತನ ತಡೆಯಿಡಿಯುವುದು ತಪ್ಪು. ಆರನೇ ವೇತನ ಆಯೋಗ ಜಾರಿಯಾಗುವವರೆಗೂ ನಮ್ಮಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಇನ್ನು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನೌಕರರ ಪರ ಹೋರಾಟಗಾರರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಸುಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ, ರಾಜ್ಯವ್ಯಾಪಿ ಹೆಚ್ಚುವರಿ ರೈಲುಗಳ ವ್ಯವಸ್ಥೆಯನ್ನು ಮಾಡಿದೆ.