ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ 2021 ಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ವರ್ಷ ಕುಂಭಮೇಳವು ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ಪವಿತ್ರ ನಗರ ಹರಿದ್ವಾರದಲ್ಲಿ ನಡೆಯಲಿದೆ. ಭಕ್ತರಿಗೆ ಶುದ್ಧೀಕರಿಸಿದ ಕುಡಿಯುವ ನೀರು, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳು, ಕ್ಯಾಂಟೀನ್‌ಗಳ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಉತ್ತರಾಖಂಡ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಮತ್ತು ಶಾಶ್ವತ ಸೌಲಭ್ಯಗಳನ್ನು ಸಹ ಒದಗಿಸಲಾಗುವುದು. ಜನಸಂದಣಿಯನ್ನು ನಿಯಂತ್ರಿಸಲು ಗಂಗಾ ಘಟ್ಟದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾತ್ರಿಕರು ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಸಲ್ಲಿಸಿದ ನಂತರವೇ ಅವರಿಗೆಪ್ರವೇಶ ನೀಡಲಾಗುವುದು. ಅಲ್ಲದೇ,ಪಾಸ್ ಇಲ್ಲದವರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ.
ಕೊರೋನಾ ಸಾಂಕ್ರಾಮಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ಕುಂಭ ಮೇಳವನ್ನು ಮೂರು ತಿಂಗಳುಗಳ ಬದಲಿಗೆ 48 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಮಾರ್ಚ್ ಕೊನೆಯ ವಾರದಲ್ಲಿ ಮುಖ್ಯ ಸ್ನಾನಗೃಹಗಳಿಗೆ ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಲಾಗಿದೆ. ಉತ್ತರಾಖಂಡ ಸರ್ಕಾರ ತಾತ್ಕಾಲಿಕ 1,000 ಬೆಡ್ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸಾಮಗ್ರಿಗಳನ್ನು ಖರೀದಿಸಲು ಸಿಎಂ 15.46 ಕೋಟಿ ರೂ. ಅನುದಾನ ನೀಡಿದ್ದು, ಇದರಲ್ಲಿ ಮೊದಲ ಕಂತಿನಲ್ಲಿ 6.18 ಕೋಟಿ ರೂ. ಬಿಡುಗಡೆ ಮಾಡಿದೆ.
ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳಿಗೆ ಕುಂಭಮೇಳದ ಸಿದ್ಧತೆಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ. ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಪರಿಗಣಿಸಿ, ಯಾತ್ರಿಕರಿಗೆ ಯಾವುದೇ ತೊಡಕಾಗದಂತೆ ವ್ಯವಸ್ಥೆಗಳನ್ನು ಮಾಡಲಾಗುವುದು. ಕುಂಭಮೇಳಕ್ಕೆಂದೇ ನಿರ್ಮಿಸಲಾಗುತ್ತಿರುವ ಹೊಸ ಘಾಟುಗಳು, ಐದಕ್ಕೂ ಅಧಿಕ ಸೇತುವೆಗಳು ಈಗಾಗಲೇ ಮುಕ್ತಾಯ ಹಂತದಲ್ಲಿವೆ. ವಾಹನ ನಿಲುಗಡೆ ಮತ್ತು ಅತಿಕ್ರಮ ಪ್ರವೇಶವನ್ನು ತಡೆಯಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.