ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆ ಡಿ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಗಂಭೀರವಾಗಿದೆ. ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲು ನಿರ್ಧರಿಸಲಾಗಿದೆ. ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ, ದೆಹಲಿ ಏಮ್ಸ್ ಗೆ ವರ್ಗಾಯಿಸುವಂತೆ ರಿಮ್ಸ್ ನ ತಜ್ಞ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರವೇ ಲಾಲೂ ಪ್ರಸಾದ್ ಯಾದವ್ ಅವರನ್ನು ದಿಲ್ಲಿಗೆ ರವಾನೆ ಮಾಡಲು ನಿರ್ಧರಿಸಲಾಗಿದೆ.
ರಿಮ್ಸ್ ನ 7 ತಜ್ಞ ವೈದ್ಯರ ತಂಡ ಲಾಲೂ ಪ್ರಸಾದ್ ಯಾದವ್ ಆರೋಗ್ಯದ ಮೇಲೆ ನಿಗಾ ಇರಿಸಿದ್ದರು. ಆದ್ರೆ, ಅವರ ದೇಹಸ್ಥಿತಿ ವಿಷಮವಾಗಿರುವ ಕಾರಣ, ದಿಲ್ಲಿ ಏಮ್ಸ್ ಗೆ ರವಾನೆ ಮಾಡುವುದೊಂದೇ ತಮಗಿರುವ ದಾರಿ ಎಂದು ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಂಚಿ ಕಾರಾಗೃಹದ ಅಧೀಕ್ಷಕರಿಗೂ ಮಾಹಿತಿ ನೀಡಿರುವ ರಿಮ್ಸ್ ತಜ್ಞರು, ಈ ಕೂಡಲೇ ದಿಲ್ಲಿಗೆ ರವಾನಿಸುವಂತೆ ಸಲಹೆ ನೀಡಿದ್ದಾರೆ.
ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಲಾಲೂ ಪ್ರಸಾದ್ ಯಾದವ್ ಎದುರಿಸುತ್ತಿದ್ದಾರೆ. ಅವರ ಮೂತ್ರಪಿಂಡ ಕೇವಲ ಶೇ. 15 ರಿಂದ 20ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಹುಕೋಟಿ ಮೇವು ಹಗರಣದ ತಪ್ಪಿತಸ್ಥ ಎಂದು ಸಾಬೀತಾಗಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಈಗಾಗಲೇ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ, 60 ಲಕ್ಷ ರೂ. ದಂಡ ಕೂಡಾ ವಿಧಿಸಿದೆ. ಫೆಬ್ರವರಿ 21ರಂದು ತೀರ್ಪು ಹೊರಬಿದ್ದ ಬಳಿಕ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಮೇವು ಖರೀದಿಗಾಗಿ ಇರಿಸಿದ್ದ 139 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡ ಒಂದು ಪ್ರಕರಣದಲ್ಲಿ ಫೆಬ್ರವರಿ 21ರಂದು ತೀರ್ಪು ಪ್ರಕಟವಾಗಿತ್ತು. ದೊರಾಂಡಾ ಖಜಾನೆಯಿಂದ ಅನಧಿಕೃತವಾಗಿ 139 ಕೋಟಿ ರೂ. ಹಣವನ್ನು ತೆಗೆದ ಪ್ರಕರಣ ಇದಾಗಿದೆ.
ಫೆಬ್ರುವರಿ 15ರಂದು ಲಾಲೂ ಪ್ರಸಾದ್ ಯಾದವ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ನ್ಯಾಯಾಲಯ, ಫೆಬ್ರುವರಿ 21ರಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಿತ್ತು.
ಕೋರ್ಟ್ ತೀರ್ಪು ಹಾಗೂ ಜೈಲು ಶಿಕ್ಷೆ ಪ್ರಕಟವಾದ ಬಳಿಕ ಹದಗೆಟ್ಟ ಲಾಲೂ ಪ್ರಸಾದ್ ಆರೋಗ್ಯ ಇದೀಗ ವಿಷಮ ಸ್ಥಿತಿ ತಲುಪಿದೆ ಎಂದು ವೈದ್ಯರು ಹೇಳಿದ್ದಾರೆ. ಲಾಲೂ ಪ್ರಸಾದ್ ಅವರ ರಕ್ತದಲ್ಲಿ ಕ್ರಿಟೈನಿನ್ ಪ್ರಮಾಣ 4.6ಕ್ಕೆ ಏರಿಕೆ ಕಂಡಿದೆ. ಈ ಮುನ್ನ ಈ ಪ್ರಮಾಣ 3.5 ಇತ್ತು. ಇನ್ನು ಲಾಲೂ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಹಾಗೂ ರಕ್ತದೊತ್ತಡ ಕೂಡಾ ತುಂಬಾನೇ ಏರುಪೇರಾಗುತ್ತಿದೆ. ಲಾಲೂ ಅವರ ದೇಹದಲ್ಲಿನ ಗ್ಲೂಕೋಸ್ ಪ್ರಮಾಣ 150 ರಿಂದ 200ರ ಆಸುಪಾಸಿನಲ್ಲಿ ಇದೆ ಎಂದು ರಿಮ್ಸ್ ವೈದ್ಯ ಡಾ. ವಿದ್ಯಾಪತಿ ತಿಳಿಸಿದ್ದಾರೆ.
ಇದನ್ನೂ ಓದಿ – ಅಕ್ರಮ ಗಳಿಕೆ ಆಸ್ತಿ ಆರೋಪದಲ್ಲಿ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ..!