ವರದಿ: ಗುರುರಾಜ ಹೂಗಾರ
ವಿಜಯಪುರ: ನನ್ನನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡು. ನನ್ನ ಕಾಲು ನೋವನ್ನು ಗುಣಪಡಿಸು, ನನ್ನ ಮಗನಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟ್ ಸಿಗುವಂತೆ ಆಶೀರ್ವದಿಸು. ಹೀಗೆ ಭಕ್ತರು ಆಂಜನೇಯ ಸ್ವಾಮಿಗೆ ಪತ್ರ ಬರೆದಿದ್ದಾರೆ. ಇದು ವಿಚಿತ್ರವೆನಿಸಿದರೂ ಸತ್ಯ. ಏಳೂರ ಒಡೆಯ ಎಂತಲೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಯಲಗೂರೇಶನಿಗೆ ಭಕ್ತರು ಹೀಗೆಲ್ಲ ಪತ್ರ ಬರೆದಿದ್ದಾರೆ. ಐತಿಹಾಸಿಕ ಯಲಗೂರು ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ ಪತ್ರಗಳು ಸಿಕ್ಕಿವೆ. ಸದ್ಯ ಈ ಪತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಹಾಯಕ ಆಯುಕ್ತ ಬಲರಾಮ್ ರಾಠೋಡ್, ತಾಲೂಕು ದಂಡಾಧಿಕಾರಿ ಶಿವಲಿಂಗಪ್ರಭು ನೇತೃತ್ವದಲ್ಲಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯಿತು. 25 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದ್ದು, ಇದೇ ವೇಳೆ ದೇವರಿಗೆ ತಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ಮೊರೆ ಇಟ್ಟಿರುವ ಭಕ್ತರ ಪತ್ರಗಳು ಸಿಕ್ಕಿವೆ. ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ದೇವಾಲಯದಲ್ಲಿ ಪ್ರತಿ
ಈ ದೇವಾಲಯದಲ್ಲಿ ಪ್ರತಿ ವರ್ಷ ಮಾಘಮಾಸದ ಕೃಷ್ಣ ಪಕ್ಷದ ಮೊದಲ ಶನಿವಾರ ಮತ್ತು ರವಿವಾರಗಳಂದು ಕಾರ್ತಿಕೋತ್ಸವ ಜರುಗುತ್ತದೆ.ಈ ಸಂದರ್ಭದಲ್ಲಿ ಸುತ್ತಲಿನ ಏಳು ಊರುಗಳಲ್ಲದೇ ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತ ಜನರು ಹೋಳಿಗೆ ನೈವೇದ್ಯವನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಅಲ್ಲದೇ, ಈ ಭಾಗದ ಜನರು ತಾವು ಮಾಡುವ ಯಾವುದೇ ಉತ್ತಮ ಕಾರ್ಯಗಳಿಗೆ ಆ ಕಾರ್ಯ ಕೈಗೊಳ್ಳುವ ಮೊದಲು ಈ ದೇವಾಲಯಕ್ಕೆ ಬಂದು ಎಲೆ ಪೂಜೆ ಮಾಡಿಸಿ ಪ್ರಶ್ನೆ ಕೇಳುವ ಸಂಪ್ರದಾಯವಿದೆ. ಅಂದರೆ ಇಲ್ಲಿ ಪ್ರಶ್ನೆ ಕೇಳಿದಾಗ ಹನುಮಪ್ಪನ ಬಲಭಾಗದಿಂದ ಹೂ ಬಿದ್ದರೆ ಅವರು ಕೈಗೊಳ್ಳುವ ಕೆಲಸ ಯಶಸ್ವಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.