ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 14ರಿಂದ 21ರವರೆಗೆ ಲಾಕ್ ಡೌನ್ ಮುಂದುವರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಘೋಷಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಎಲ್ಲರ ಅಭಿಪ್ರಾಯದಂತೆ ಜೂನ್ 14ರ ನಂತರವೂ ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.
ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ವಿನಾಯಿತಿ ಕೊಡಬೇಕು ಎಂಬುದರ ಕುರಿತು ಚರ್ಚಿಸಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಿದ್ದಾರೆ. ಅನ್ ಲಾಕ್ ಮಾಡಬೇಕಾದರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರಬೇಕು ಅನ್ನುವ ನಿಯಮ ಇದೆ. ಮೈಸೂರಿನಲ್ಲಿ ಪ್ರಸ್ತುತ ಶೇ.13 ರಷ್ಟು ಪಾಸಿಟಿವಿಟಿ ರೇಟ್ ಇದೆ. ಇದನ್ನು ಅತೀ ಶೀಘ್ರದಲ್ಲಿ ಶೇ.5ಕ್ಕಿಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗ ಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಹಾಗೂ ಎಸ್ಪಿ ಒಂದೇ ಕಾರಿನಲ್ಲಿ ಕ್ಷೇತ್ರ ಸಂಚಾರ ಮಾಡಲಿದ್ದು, ಮೈಸೂರಿನ ಎಲ್ಲಾ 11 ಕ್ಷೇತ್ರಗಳಿಗೂ ಒಟ್ಟಿಗೆ ಭೇಟಿಕೊಟ್ಟು ಕೊರೊನಾ ಪರಿಸ್ಥಿತಿ ತಹಬದಿಗೆ ತರಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.