ಜೂನ್ 7ರ ನಂತರವೂ ಲಾಕ್ ಡೌನ್ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು ಎರಡು ಹಂತಗಳಲ್ಲಿ ಜಾರಿಗೆ ತರಲಿದೆ ಎಂದು ವರದಿಯಾಗಿದೆ.
ಬುಧವಾರ ನಡೆದ ಸಚಿವರ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ಲಾಕ್ ಡೌನ್ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಜೂನ್ 14ರವರೆಗೆ ಒಂದು ಹಂತ ಹಾಗೂ ಜೂನ್ 14ರಿಂದ 21ರವರೆಗೆ ಎರಡನೇ ಹಂತದ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಒಂದೇ ಬಾರಿ 14 ದಿನ ಲಾಕ್ ಡೌನ್ ವಿಸ್ತರಿಸಿದರೆ ಜನರು ಆತಂಕಕ್ಕೆ ಒಳಗಾಗುತ್ತಾರೆ. ಅಲ್ಲದೇ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದೇ ಬಾರಿ ಜಾರಿ ಮಾಡದೇ 7 ದಿನಕ್ಕೊಂದು ಲಾಕ್ ಡೌನ್ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಸಂಜೆ ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದಿದ್ದು, ಅಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ 700 ಕೋಟಿ ರೂ. ಮೊತ್ತದ ಮತ್ತೊಂದು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ ಎಂದು ಹೆಳಲಾಗಿದೆ.
ಸೋಂಕು ಕಡಿಮೆ ಇರುವ ಜಿಲ್ಲೆ ಗಳಲ್ಲಿ ಲಾಕ್ ಡೌನ್ ಸಡಿಲ ಮಾಡುವ ಕುರಿತು ಚರ್ಚೆಗಳು ನಡೆದಿದ್ದು, ಜನರ ಓಡಾಟ ಹೆಚ್ಚಿದಷ್ಟೂ ಸೋಂಕು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.