ಲಾಕ್ ಡೌನ್ ವೇಳೆ ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಹೈಕೋರ್ಟ್ ಸೂಚನೆ ಮೇರೆಗೆ ಮಾಲೀಕರಿಗೆ ಮರಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ವಾಹನ ವಾಪಸ್ ಪಡೆಯಬೇಕಾದರೆ ಮಾಲೀಕರು ಈ ಎಲ್ಲಾ ಷರತ್ತುಗಳನ್ನು ಪೂರೈಸಬೇಕಾಗಿದೆ.
ಹೌದು ಲಾಕ್ ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರುವಾಗಿದೆ. ಸೀಜ್ ಆಗಿದ್ದ ವಾಹನ ರಿಲೀಸ್ ಆಗಬೇಕಾದರೆ ಲಾಕ್ ಡೌನ್ ನಿಯಮ ಉಲ್ಲಂಘನೆ ದಂಡದ ಜೊತೆಗೆ ಹಳೆಯ ಕೇಸ್ ಗಳನ್ನು ಕ್ಲಿಯರ್ ಮಾಡಬೇಕಿದೆ.
ಈ ಹಿಂದೆ ಪಾರ್ಕಿಂಗ್, ರಸ್ತೆ, ಸಂಚಾರ ಮುಂತಾದ ನಿಯಮ ಉಲ್ಲಂಘನೆಗಾಗಿ ವಿಧಿಸಲಾಗಿದ್ದ ದಂಡ ಹಾಗೂ ಲಾಕ್ ಡೌನ್ ನಿಯಮ ಉಲ್ಲಂಘನೆಯ 500 ರೂ. ದಂಡ ಪಾವತಿಸಿದಷ್ಟೇ ಪೊಲೀಸರು ವಾಹನವನ್ನು ಮರಳಿಸಲಿದ್ದಾರೆ.
ವಾಹನ ವಾಪಸ್ ಪಡೆಯಲು ಬರುವ ಮಾಲೀಕರು 100 ರೂ. ಬಾಂಡ್ ಪೇಪರ್, ಆಧಾರ್ ಕಾರ್ಡ್, ಡಿಎಲ್, ಆರ್ ಸಿ ದಾಖಲೆ ಝೆರಾಕ್ಸ್ ಮತ್ತು ಒಂದು ಫೋಟೊ ಕಡ್ಡಾಯವಾಗಿ ಪೊಲೀಸ್ ಠಾಣೆಗೆ ತರಬೇಕು. ಬಾಂಡ್ ಪೇಪರ್ ಮೇಲೆ ಬರೆದುಕೊಟ್ಟ ನಂತರವೇ ವಾಹನ ಬಿಡುಗಡೆ ಆಗಲಿದೆ.
ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ಸುಮಾರು 36 ಸಾವಿರಕ್ಕೂ ಅಧಿಕ ವಾಹನಗಳು ಸೀಜ್ ಮಾಡಲಾಗಿದೆ. ನಗರದ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಮಾಲೀಕರಿಗೆ ವಾಹನ ಮರಳಿಸುವ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ.