“ಮಹಾ ” ಎಡವಟ್ಟು: ಮಕ್ಕಳಿಗೆ ಪೋಲಿಯೋ ಬದಲು ಸ್ಯಾನಿಟೈಸರ್
ಮುಂಬೈ: ಮಹಾರಾಷ್ಟ್ರದಲ್ಲಿ ಪೋಲಿಯೋ ಸಿಬ್ಬಂದಿಯ ಎಡವಟ್ಟಿನಿಂದ 12 ಮಕ್ಕಳಿಗೆ ಪೋಲಿಯೋ ಬದಲು ಹ್ಯಾಂಡ್ ಸ್ಯಾನಿಟೈಸರ್ ಹಾಕಲಾಗಿದೆ. ಸ್ಯಾನಿಟೈಸರ್ ಹನಿಗಳನ್ನು ಹಾಕಿದ ಪರಿಣಾಮ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನೆಯ ಅಂಗವಾಗಿ ಭಾನುವಾರ ಬೆಳಗ್ಗೆ ಗ್ರಾಮ ಪಂಚಾಯತ್ ಪ್ರದೇಶದ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕಿತ್ತು. ಅಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ಹಾಕುವ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹನಿಯನ್ನು ಹಾಕಲಾಗಿದೆ.
ಕಪ್ಸಿಕೊಪ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಗೆ ಪೋಲಿಯೋ ಹನಿ ಬದಲಿಗೆ ಎರಡು ಹನಿ ಸ್ಯಾನಿಟೈಸರ್ ಹಾಕಲಾಗಿದೆ. ನಂತರ ಸ್ಥಳದಲ್ಲೇ ಒಂದು ಮಗು ವಾಂತಿ ಮಾಡಿಕೊಂಡಿದೆ. ಈ ಘಟನೆಯ ಬಳಿಕ ಎಚ್ಚೆತ್ತ ಸಿಬ್ಬಂದಿ ಪರೀಕ್ಷಿಸಿದಾಗ ಪೋಲಿಯೋದ ಬದಲಿಗೆ ಸ್ಯಾನಿಟೈಸರ್ ಹಾಕಿರುವುದು ದೃಢವಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಇನ್ನು, ಈ ದುರ್ಘಟನೆಗೆ ಕಾರಣರಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.