ಮಲೆ ಮಹದೇಶ್ವರ ಹುಂಡಿಯಲ್ಲಿ ಸಂಗ್ರಹವಾದ 2.21 ಕೋಟಿ ರೂ.

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಒಂದು ತಿಂಗಳಲ್ಲಿ ಕೋಟ್ಯಂತರ ರೂ. ಸಂಗ್ರಹವಾಗಿದೆ. ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಒಟ್ಟು 2.21 ಕೋಟಿ ರೂ. ಹಣ ಸಂಗ್ರಹವಾಗಿದೆ. ಕೊರೋನಾ ಕಾರಣದಿಂದ ದೇವಸ್ಥಾನದಲ್ಲಿ ಉತ್ಸವಗಳು ಮತ್ತು ವಿಶೇಷ ಸೇವೆಗಳಿಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಭಕ್ತರು ಹುಂಡಿಗೆ ಹೆಚ್ಚಿನ ಪ್ರಮಾಣದ ಕಾಣಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ 42 ದಿನಗಳ ಅವಧಿಯಲ್ಲಿ 1.92 ಕೋಟಿ ರೂ. ಸಂಗ್ರಹವಾಗಿತ್ತು. ಇದಲ್ಲದೇ, 170ಗ್ರಾಂ ಚಿನ್ನ, 3.8ಕೆ.ಜಿ. ಬೆಳ್ಳಿ ಕಾಣಿಕೆಯಾಗಿ ಬಂದಿತ್ತು. ಆದರೆ ಈ ಬಾರಿ 80 ಗ್ರಾಂ ಚಿನ್ನ ಮತ್ತು ಎರಡು ಕೆ.ಜಿ.ಯಷ್ಟು ಬೆಳ್ಳಿ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದ ಸಮಯದಲ್ಲಿ ದೇವಾಲಯದ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.