ದೇವರಿಗೆ ಬಿಟ್ಟಿದ್ದ ಕುರಿ ಮೊಮ್ಮಗಳಿಗೆ ಗುದ್ದಿದ್ದರಿಂದ ಮೇಕೆ ಒಂದು ಕಟ್ಟಿ ಹಾಕಲು ಹೇಳಿದ್ದಕ್ಕಾಗಿ ವೃದ್ಧನನ್ನು ಹೊಡೆದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ತೀವ್ರ ಹಲ್ಲೆಯಿಂದ ಹೃದಯಾಘಾತಕ್ಕೊಳಗಾಗಿ ಚಂದ್ರಶೇಖರ್ (65) ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ರವಿಕುಮಾರ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಬಿಸುವನಹಳ್ಳಿಲಿ ಮೇಕೆಯನ್ನು ದೇವರಿಗೆ ಬಿಡಲಾಗಿತ್ತು. ಈ ಮೇಕೆ ಮೃತ ಚಂದ್ರಶೇಖರ್ ಮೊಮ್ಮಗಳಿಗೆ ಗುಮ್ಮುತ್ತಿತ್ತು. ಮೇಕೆಯನ್ನು ಕಟ್ಟಿ ಹಾಕುವಂತೆ ರವಿಕುಮಾರ್ ಗೆ ಚಂದ್ರಶೇಖರ್ ಪದೇಪದೆ ಹೇಳುತ್ತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿ ರವಿಕುಮಾರ್ ಕಾಲಿನಿಂದ ಚಂದ್ರಶೇಖರ್ ಎದೆಗೆ ಒದ್ದಿದ್ದಾನೆ.
ಎದೆ ನೋವಿನಿಂದ ಚಂದ್ರಶೇಖರ್ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.