ಮಂಡ್ಯ : ನಾವು ಮೊದಲು ಕನ್ನಡಿಗರು, ನಂತರ ಭಾರತೀಯರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಕನ್ನಡದ ಅಸ್ಮಿತೆಗೆ ಧಕ್ಕೆ ಬಂದರೆ ರಕ್ತಪಾತವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕರ್ನಾಟಕ ಸಂಘದ ಆವರಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ.ಹಾಮಾನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಹಿಂದಿಯು ಉತ್ತರ ಭಾರತದ ಕೆಲವು ರಾಜ್ಯಗಳ ಭಾಷೆಯಾಗಿದೆ. ಅದು ಹೇಗೆ ರಾಷ್ಟ್ರ ಭಾಷೆಯಾಗುತ್ತದೆ? ಸಂವಿಧಾನತ್ಮಕವಾಗಿ ಹಿಂದೆ ಯಾವ ಸ್ಥಾನವಿದೆಯೋ ಅದೇ ಸ್ಥಾನ ಕನ್ನಡಕ್ಕೆ ಇದೆ.
ಎಂದಿಗೂ ಅಹಿಂದ ಪರ: ಅಹಿಂದ ಸಮಾವೇಶ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಎಂದಿಗೂ ನಾನು ಅಹಿಂದ ಪರ, ಆ ವರ್ಗಕ್ಕೆ ನ್ಯಾಯ ಸಿಗಬೇಕು. ಅಹಿಂದ ವಿಚಾರ ತಮಗೆ ಗೊತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರು ಎಂದೂ ಅಹಿಂದ ಸಮಾವೇಶ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ. ಹೀಗಾಗಿ, ಆ ರೀತಿ ಹೇಳಿರಬಹುದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ವಿಶ್ವನಾಥ್ ಗಂಭೀರ ರಾಜಕಾರಣಿ ಅಲ್ಲ. ನನ್ನ ಬಗ್ಗೆ ಅವರಿಗೆ ಭಯ ಇರಬೇಕು. ಹೀಗಾಗಿ, ಪದೇಪದೇ ನನ್ನ ಬಗ್ಗೆಯೇ ಕನವರಿಸುತ್ತಿದ್ದಾರೆ ಎಂದರು. ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆ ಇಲ್ಲ ಬಗ್ಗೆ ಯಾವುದೇ ಭರವಸೆ ಇಲ್ಲ. ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಖಜಾನೆ ಖಾಲಿಯಾಗಿದೆ. ₹35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡುವುದೇ ಆಗುತ್ತದೆ. ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ? ರಾಜ್ಯ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದರು.