ಕೆಆರ್ ಎಸ್ ಜಲಾಶಯದ ಭದ್ರತೆ ಕುರಿತು ಆತಂಕ ಮೂಡಸಿದ್ದ ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ.
ಮಂಡ್ಯ ಜಿಲ್ಲಾಡಳಿತ ಮಂಗಳವಾರ ಬೇಬಿ ಬೆಟ್ಟ ಸೇರಿದಂತೆ ಮಂಡ್ಯದ ವಿವಿಧೆಡೆ ನಡೆಯುತ್ತಿದ್ದ 44 ಗಣಿಗಾರಿಕೆ ಗುತ್ತಿಗೆ ರದ್ದುಪಡಿಸಿ ಆದೇಶ ಹೊರಡಿಸಿದೆ.
ಲೈಸೆನ್ಸ್ ಪಡೆಯದ, ಲೈಸೆನ್ಸ್ ನವೀಕರಿಸದ 11 ಕಲ್ಲು ಗಣಿಗಳ ಗುತ್ತಿಗೆ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಎ ಫಾರಂ ಹೊಂದದ 22 ಕಲ್ಲು ಕ್ವಾರಿಗಳು ಹಾಗೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ 11 ಕಲ್ಲು ಕ್ವಾರಿಗಳ ಲೈಸೆನ್ಸ್ ಸಹ ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದು ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು.