ಮಂಡ್ಯದ ಜನ ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸುತ್ತಾರೆ: ಸಚಿವ ನಾರಾಯಣಗೌಡ

ಮಂಡ್ಯ: ಕನ್ನಡ ನಾಡು ನುಡಿಗೆ, ಕನ್ನಡ ಸಾಹಿತ್ಯಕ್ಕೆ ಮಂಡ್ಯದ ಸಾಹಿತಿಗಳ, ಕಲಾವಿದರ ಕೊಡುಗೆ ಅಪಾರ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. ಇಂದು ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉತ್ತಮವಾದ ಸಾಹಿತ್ಯದ ಮೂಲಕ ನಮ್ಮ ನಾಡಿನ ಹಿರಿಮೆ ಗರಿಮೆ ಹೆಚ್ಚಿಸುವುದು ಪ್ರಮುಖ ಗುರಿಯಾಗಿರುತ್ತದೆ. ನಾವು ನಮ್ಮತನವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ನೂತನ ಶಿಕ್ಷಣ ನೀತಿ ಈ ವರ್ಷದಿಂದ ಜಾರಿಗೊಳ್ಳಲಿದೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಶಿಕ್ಷಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಅವರ ಸಂಘಟನೆಯಲ್ಲಿ ಮಂಡ್ಯ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ ಅವರ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲೆಯಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತಾಪಿ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿವೆ, ವ್ಯವಸಾಯ ಕಾರ್ಯಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಇಸ್ರೇಲ್ ಮಾದರಿಯಲ್ಲಿ ಕೃಷಿಯನ್ನು ಮಾಡೋಣ ಎಂದರು.
ರೈತರು ಡಿಜಿಟಲ್ ಫಾರ್ಮಿಂಗ್ ಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವೈಜ್ಞಾನಿಕವಾಗಿ ಕೃಷಿಯನ್ನು ಮಾಡಲು ಸಾಧ್ಯವಿದೆ. ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತರ ಬೆಳೆಗಳಿಗೆ ಉತ್ತಮವಾದ ಬೆಲೆ ದೊರಕಿ ಅವರ ಆದಾಯದಲ್ಲಿ ಹೆಚ್ಚಳವಾಗಬೇಕು ಮತ್ತು ಅವರನ್ನು ಆರ್ಥಿಕವಾಗಿ ಸಬಲರಾಗಲು ಬೇಕಾಗುವಂತಹ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ನಿರುದ್ಯೋಗ ಮಟ್ಟವನ್ನು ಕಡಿಮೆ ಮಾಡಲು ಅತಿ ಶೀಘ್ರದಲ್ಲೇ 1ಕೋಟಿ ಉದ್ಯೋಗವನ್ನು ಸೃಷ್ಟಿಸಲಾಗುವುದು ಎಂದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ, ಮಂಡ್ಯದ ಜನತೆ ಕನ್ನಡವನ್ನ ತಾಯಿಯಂತೆ ಪ್ರೀತಿಸುತ್ತಾರ. ಮಂಡ್ಯ ಸಾಹಿತ್ಯ ,ಸಂಸ್ಕೃತಿ, ಸಾಂಸ್ಕೃತಿಕ ರಂಗ, ರಾಜಕೀಯ, ಕಲೆ, ಸಿನಿಮಾ ಎಲ್ಲಾ ರಂಗದಲ್ಲೂ ಹೆಸರುವಾಸಿ ಪಡೆದಿದೆ. ಕನ್ನಡ ಸಾಹಿತ್ಯಕ್ಕೆ ಮಂಡ್ಯದ ಕೆ.ಎಸ್ ನರಸಿಂಹಸ್ವಾಮಿರವರು, ನಾಗೇಗೌಡರು, ಬಿ.ಎಂ ಶ್ರೀಕಂಠಯ್ಯ ರವರು, ಸಿನಿಮಾದಲ್ಲಿ ಅಂಬರೀಶ್ ಅವರ ಸಾಧನೆ ನಾವು ಮರೆಯುವಂತಿಲ್ಲ. ಇನ್ನು ಅನೇಕ ಗಣ್ಯರ ಕೊಡುಗೆ ಅಪಾರ ಎಂದರು.
ಕೊರೋನಾ ಸಂದರ್ಭದಲ್ಲಿ ಯುವಕರು ಉದ್ಯೋಗ ಕಳೆದು ಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಪ್ರತಿ ಗ್ರಾಮದಲ್ಲಿ ತರಬೇತಿಕೊಟ್ಟು ಉದ್ಯೋಗಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಮ್ಮೇಳಾನಾಧ್ಯಕ್ಷರಾದ ಮೀರಾ ಶಿವಲಿಂಗಯ್ಯರವರ ಸಾಹಿತ್ಯ, ಸೇವೆ ಎಲ್ಲವೂ ಮಂಡ್ಯ ಜನತೆಗೆ ಮಾದರಿ ಎಂದರು. ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ನುಡಿಗಳನ್ನಾಡುತ್ತ ಕನ್ನಡ ನಾಡು ನುಡಿಗೆ ಸೇವೆಮಾಡಲು ನಾನು ಸದಾಸಿದ್ಧ ಎಂದರು.