ಮಾರುಕಟ್ಟೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಯುವಕ, ಮತ್ತೊಂದೆಡೆ ಕರಾಟೆ ಅಭ್ಯಾಸ.. ಹೌದು, ಗುರಿ ಮತ್ತು ಪರಿಶ್ರಮ ನಿರಂತರವಾಗಿದ್ರೆ ಸಾಧನೆ ಮಾಡೋದಕ್ಕೆ ಬಡತನ ಅಡ್ಡಿಯಾಗೋದಲ್ಲಿ ಅನ್ನೋದಕ್ಕೆ ಈ ಯುವಕನೇ ಸಾಕ್ಷಿ. ಟೀ ವ್ಯಾಪಾರ ಮಾಡಿಕೊಂಡೇ ಕರಾಟೆ ಅಭ್ಯಾಸ ನಡೆಸುತ್ತಿದ್ದ ಈತ ಮಾಡಿರೋ ಸಾಧನೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.
ಅಂದಹಾಗೆ ಈತನ ಹೆಸರು ಶಶಾಂಕ್. ಮಂಡ್ಯದ ಗಾಯತ್ರಿ ಬಡಾವಣೆಯ ರಾಜಣ್ಣ ಮತ್ತು ವರಲಕ್ಷ್ಮೀ ಅವ್ರ ಮಗ. ಈತನಿಗೆ ಬಾಲ್ಯದಿಂದಲೂ ಕರಾಟೆ ಅಂದ್ರೆ ಎಲ್ಲಿಲ್ಲದ ಆಸಕ್ತಿ. ತನ್ನ 20ನೇ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ಅದ್ಬುತ ಸಾಧನೆ ಮಾಡಿದ್ದಾನೆ.
ಶಶಾಂಕ್ ತಂದೆ ಮಂಡ್ಯದ ತರಕಾರಿ ಮಾರುಕಟ್ಟೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ರು. ಮೊದಮೊದಲು ಟೀ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡಿಕೊಂಡಿದ್ದ ಶಶಾಂಕ್, ಬಳಿಕ ತಂದೆ ಅನಾರೋಗ್ಯಕ್ಕೆ ತುತ್ತಾದಾಗ ಇಡೀ ಕುಟುಂಬದ ಜವಾಬ್ದಾರಿ ಹೊತ್ತು ತಾನೇ ಟೀ ಅಂಗಡಿಯಲ್ಲಿ ವ್ಯಾಪಾರ ಆರಂಭಿಸಿದ್ದ. ಆದ್ರೆ ಆತನಿಗೆ ಕರಾಟೆ ಮೇಲಿದ್ದ ಆಸಕ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಬೆಳಿಗ್ಗೆ 3 ಗಂಟೆಗೆ ಟೀ ಅಂಗಡಿ ತೆರೆದು 5 ಗಂಟೆ ವರೆಗೆ ಕೆಲಸ ಮಾಡಿ, ಬಳಿಕ 8,30ರವರೆಗೆ ಕರಾಟೆ ಅಭ್ಯಾಸ ಮಾಡುವ ಈತ, ಮತ್ತೆ ಟೀ ಮಾರಾಟ ಮಾಡ್ತಾನೆ. ಸತತ ಪರಿಶ್ರಮದಿಂದ ಟೋರ್ನಾಡೋ ಕಿಕ್ ವಿಭಾಗದಲ್ಲಿ 1 ನಿಮಿಷದಲ್ಲಿ 62 ಕಿಕ್ ಮಾಡುವ ಮೂಲಕ ದಾಖಲೆ ಬರೆದಿದ್ದಾನೆ.
10ನೇ ತರಗತಿಯಲ್ಲಿ ಶೇ.56ರಷ್ಟು ಅಂಗ ಪಡೆದಿರುವ ಶಶಾಂಕ್, ಡಿಪ್ಲಮೋ ಇನ್ ಮಾರ್ಷಲ್ ಆರ್ಟ್ಸ್ ಮಾಡುತ್ತಿದ್ದು, ಮಂಡ್ಯದ ಓಶೋಕಾಯ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಡಾ.ಎಸ್.ಕೃಷ್ಣಮೂರ್ತಿ ಅವರಿಂದ ಕರಾಟೆ ತರಬೇತಿ ನಡೆಸುತ್ತಿದ್ದಾನೆ. ಶಶಾಂಕ್ ಗೆ ಕರಾಟೆ ಮೇಲಿದ್ದ ಆಸಕ್ತಿ ಕಂಡು ಕೃಷ್ಣಮೂರ್ತಿ, ಟೊರ್ನಾಡೋ ಕಿಕ್ ತರಬೇತಿ ನೀಡಲು ಆರಂಭಿಸಿದ್ರು. ಈ ಕಿಕ್ ಅಂದುಕೊಂಡಂತೆ ಸುಲಭವಲ್ಲ. ಇಡೀ ದೇಹವನ್ನು 540 ಡಿಗ್ರಿ ಮಾದರಿಯಲ್ಲಿ ತಿರುಗಿ ನಿಲ್ಲಿಸದಂತೆ ಕಿಕ್ ಹೊಡೆಯಬೇಕು. ಆರಂಭದಲ್ಲಿ ಸಿಕ್ಕಾಪಟ್ಟೆ ಸುಸ್ತು, ವಾಂತಿ, ತಲೆಸುತ್ತು ಬರುತ್ತಿದ್ದಾದರೂ ಶಶಾಂಕ್ ತರಬೇತಿ ನಿಲ್ಲಿಸಿಲ್ಲ. ಪ್ರಾರಂಭದಲ್ಲಿ ನಿಮಿಷಕ್ಕೆ 10 ಕಿಕ್‍ನಂತೆ ಅಭ್ಯಾಸ ಮಾಡುತ್ತಾ 60 ದಾಟುವ ಹಂತಕ್ಕೆ ತಯಾರಾಗುವುದಕ್ಕೆ 8 ತಿಂಗಳು ಬೇಕಾಯಿತು. ಬಳಿಕ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡುವ ಉತ್ತರ ಪ್ರದೇಶದ ಸಂಸ್ಥೆಗೆ ಒಂದೇ ನಿಮಿಷದಲ್ಲಿ ಬರೋಬರಿ 62 ಕಿಕ್ ಹೊಡೆದ ವಿಡಿಯೋವನ್ನು ಕಳುಹಿಸಲಾಯಿತು. ಸಮಗ್ರವಾಗಿ ಪರಿಶೀಲಿಸಿದ ನಂತರ ಜೂ.28ರಂದು ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಕಳುಹಿಸಲಾಗಿದೆ. ಇದಲ್ಲದೆ ವಿಡಿಯೋವನ್ನು ಗಿನ್ನೀಸ್ ರೆಕಾರ್ಡ್‍ಗೂ ಕಳುಹಿಸಲಾಗಿದ್ದು, ಅಲ್ಲಿಂದ ಬರುವ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಶಶಾಂಕ್ ಎರಡು ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದು, ಒಮ್ಮೆ ಕಂಚಿನ ಪದಕ ಜಯಿಸಿದ್ದಾನೆ. ಒಟ್ಟಾರೆ ಆರ್ಥಿಕ ಸಮಸ್ಯೆಯ ನಡುವೆಯೂ ಸತತ ಪರಿಶ್ರಮದಿಂದ ಸಾಧನೆ ಹಾದಿಯಲ್ಲಿರುವ ಈ ಯುವಕನಿಗೆ ಪ್ರೋತ್ಸಾಹ ಸಿಕ್ಕರೆ ಹೆಚ್ಚಿನ ಸಾಧನೆ ಮಾಡಬಹುದಾಗಿದೆ.
ಮದನ್ ಗೌಡ ರಾಜ್ ನ್ಯೂಸ್ ಕನ್ನಡ ಮಂಡ್ಯ