ಮಂಗಳೂರು : ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಘಡನೆ ಮಂಗಳೂರಿನ ಲಾಲ್ ಬಾಗ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಲಾಲ್ ಬಾಗ್ ಬಳಿ ಬೈಕಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಸುಮಾರು ಆರು ಜನರಿದ್ದ ದುಷ್ಕರ್ಮಿಗಳ ತಂಡವು ಕ್ಷುಲಕ ಕಾರಣಕ್ಕೆ ಯುವಕನನ್ನು ಅಡ್ಡ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಂಡಿರುವ ಯುವಕನನ್ನು ದೀಪಕ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ದೀಪಕ್, ತನ್ನ ಬೈಕ್ ಮೇಲೆ ಶಿವಾಜಿ ಸ್ಟಿಕರನ್ನು ಹಾಕಿದ್ದರು. ಇದನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದ್ದು, ಗಾಯಗೊಂಡ ದೀಪಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ವಿಚಾರ ತಿಳಿದು ತಕ್ಷಣವೇ ಶಾಸಕ ವೇದವ್ಯಾಸ್ ಕಾಮತ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಕುರಿತು ಮಾಹಿತಿ ಪಡೆದರು. ತಕ್ಷಣವೇ ದಾಳಿಕೋರರನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.