ಮಂಗಳೂರು: ಬೃಹತ್ ಮಾನವ ಕಳ್ಳಸಾಗಣೆ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಿದ್ದಾರೆ. ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದಿದ್ದ ಶ್ರೀಲಂಕಾದ ಪ್ರಜೆಗಳು ಅಲ್ಲಿಂದ ಮಂಗಳೂರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು ಎನ್ನಲಾಗಿದೆ. ಅವರು ಇಲ್ಲಿಂದ ಕೆನಡಾಕ್ಕೆ ತೆರಳುವವರಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಮಂಗಳೂರಿನಲ್ಲೇ ಉಳಿದಿದ್ದರು.
ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಶ್ರೀಲಂಕಾದ ಪ್ರಜೆಗಳು ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ತೆರಳುವ ಯೋಜನೆ ಹೊಂದಿದ್ದರು. 6 ಲಕ್ಷ ಶ್ರೀಲಂಕಾ ರೂಪಾಯಿಗಳನ್ನು ಈ ಸಂಬಂಧ ಏಜೆಂಟಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ. ತಮಿಳುನಾಡು ಚುನಾವಣೆ ನಡೆದ ಕಾರಣ ತಪಾಸಣೆ ಚುರುಕುಗೊಂಡಿದ್ದರಿಂದ ಅವರನ್ನು ಮಂಗಳೂರಿಗೆ ತಂದು ಬಿಡಲಾಗಿತ್ತು. ಇಲ್ಲಿನ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದರು. ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ತಿಳಿಸಿದರು.
ಶ್ರೀಲಂಕಾದಿಂದ ಮಾರ್ಚ್ 17ಕ್ಕೆ ಹೊರಟು ತಮಿಳುನಾಡಿಗೆ ಬಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರು. ಮಂಗಳೂರಿನ ಎರಡು ಲಾಡ್ಜ್ ಮತ್ತು ಎರಡು ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರು. ತಮಿಳುನಾಡು ಗುಪ್ತಚರ ಇಲಾಖೆ ಪ್ರಕಾರ ಇವರು ಕೆಲಸಕ್ಕಷ್ಟೇ ಕೆನಡಾಗೆ ತೆರಳುತ್ತಿದ್ದರು. ಇವರಿಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಇರುವ ಏಜೆಂಟ್ಗಳು ಭಾರತದ ಮೂಲಕ ಕೆನಡಾಕ್ಕೆ ತೆರಳಲು ಸಹಾಯ ಮಾಡುತ್ತಿದ್ದರು. ಇಲ್ಲಿಯೂ ಏಜೆಂಟ್ಗಳಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 38 ಜನರನ್ನು ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.