ಮಂಗಳೂರು : ಅನಾರೋಗ್ಯದಲ್ಲಿರುವ ತಾಯಿಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಅರಿತ ಮಗ, ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಸೇತುವೆ ಬಳಿ ನಡೆದಿದೆ.
ಅನಂತಾಡಿ ಪಂತಡ್ಕ ನಿವಾಸಿ ನೀರಜ್(೩೦) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕನ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಗ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪಾಣೆಮಂಗಳೂರು ಸೇತುವೆಯಿಂದ ಯುವಕ ರಾತ್ರಿ ನದಿಗೆ ಹಾರಿದ್ದು, ಮಂಗಳವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ಹುಡುಕಾಡಿದರೂ, ಯುವಕನ ಸುಳಿವು ಪತ್ತೆಯಾಗಿರಲಿಲ್ಲ. ಸ್ಥಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ, ಬಂಟ್ವಾಳ ಅಗ್ನಿಶಾಮಕ ದಳದ ತಂಡ ಹುಡುಕಾಟ ನಡೆಸಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.