ಭಾರತೀಯ ಬ್ಯಾಂಕ್ ಗಳಿಗೆ ನಕಲಿ ವಜ್ರಗಳನ್ನುಕೊಟ್ಟು ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ಗೆಳತಿಗೂ ನಕಲಿ ವಜ್ರದ ಉಂಗುರ ನೀಡಿ ವಂಚಿಸಿದ್ದು ಇದೀಗ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಡೊಮೆನಿಕಾದಿಂದ ಗೆಳತಿ ಜೊತೆ ಸುತ್ತಾಡಲು ಹೋಗಿ ಸಿಕ್ಕಿಬಿದ್ದ ಮೆಹುಲ್ ಚೋಕ್ಸಿ ನನಗೂ ನಕಲಿ ವಜ್ರದ ಉಂಗುರ ನೀಡಿ ವಂಚಿಸಿದ್ದಾನೆ ಎಂದು ಗೆಳತಿ ಬಾರ್ಬಾರ ಜಾಬ್ರಿಕಾ ಗಂಭೀರ ಆರೋಪ ಮಾಡಿದ್ದಾಳೆ.
ಮೆಹುಲ್ ಚೋಕ್ಸಿಯನ್ನು ಅಪಹರಿಸಲಾಗಿತ್ತು ಎಂದು ತಮ್ಮ ಮೇಲೆ ಮಾಡಿದ ಆರೋಪ ಸುಳ್ಳು. ಸ್ವತಃ ಮೆಹುಲ್ ಚೊಕ್ಸಿ, ನನ್ನ ಜೊತೆ ಸಂಬಂಧ ಬೆಳೆಸಲು ನಕಲಿ ವಜ್ರದ ಉಂಗುರ ನೀಡಿದ್ದ. ಚೊಕ್ಸಿ ವಕೀಲರು ಮತ್ತು ಅವರ ಕುಟುಂಬದವರು ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಬಾರ್ಬಾರಾ ಆರೋಪಿಸಿದ್ದಾರೆ.
ಆಂಟಿಗುವಾ ಪೊಲೀಸರಿಗೆ ಪತ್ರ ಬರೆದಿರುವ ಬಾರ್ಬಾರಾ, ಕಳೆದ ವರ್ಷ ತನ್ನನ್ನು ರಾಜ್ ಎಂದು ಪರಿಚಯಿಸಿಕೊಂಡಿದ್ದ ಚೋಕ್ಸಿ, ನನ್ನನ್ನು ಫ್ಲರ್ಟ್ ಮಾಡಲು ನಕಲಿ ವಜ್ರದ ಉಂಗುರ ಹಾಗೂ ಬ್ರಾಸ್ ಲೇಟ್ ಗಳನ್ನು ಉಡುಗೊರೆಯಾಗಿ ನೀಡಿದ್ದ. ಆತ ಕೊಟ್ಟ ಉಡುಗೊರೆಗಳು ನಕಲಿ ಎಂಬುದು ನನಗೆ ನಂತರ ತಿಳಿಯಿತು ಎಂದು ವಿವರಿಸಿದ್ದಾರೆ.