ಹಳ್ಳಿಗಳಲ್ಲಿ ರೈತರಿಂದ ಸಂಗ್ರಹವಾದ ಹಾಲಿಗೆ ನೀರು ಬೆರೆಸಿ ಒಕ್ಕೂಟಕ್ಕೆ ತಲುಪಿಸುವ ಮೂಲಕ ಸಾವಿರಾರು ಲೀಟರ್ ಹಾಲು ಕಳವು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪತ್ತೆಯಾಗಿದ್ದು, ಪೊಲೀಸರು 6 ಟ್ಯಾಂಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಹಾಲು ಒಕ್ಕೂಟದಲ್ಲಿ ಭಾರೀ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಬಿಎಂಸಿ ಕೇಂದ್ರಗಳಿಂದ ಒಕ್ಕೂಟಕ್ಕೆ ಹಾಲು ಸಾಗಿಸಲು ವೇಳೆ ಸಾವಿರಾರು ಲೀಟರ್ ಹಾಲು ಕಳವು ಮಾಡಿ, ಒಕ್ಕೂಟಕ್ಕೆ ನೀರು ಬೆರೆಸಿದ ಹಾಲು ಪೂರೈಸಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ.
ಅಂದಹಾಗೆ ಮಂಡ್ಯ ಹಾಲು ಒಕ್ಕೂಟಕ್ಕೆ ಜಿಲ್ಲೆಯ ಎಲ್ಲಾ ಹಳ್ಳಿಗಳ ಡೈರಿಯಿಂದ ನಿತ್ಯ ಸುಮಾರು 9.50 ಲಕ್ಷ ಹಾಲು ಬರುತ್ತದೆ. ಐದಾರು ಹಳ್ಳಿಗಳಿಗೊಂದು ಬಿಎಂಸಿ ಕೇಂದ್ರ ತೆರೆದಿದ್ದು, ಡೈರಿಯಲ್ಲಿ ಶೇಖರಣೆಯಾದ ಹಾಲು ಬಿಎಂಸಿ ಕೇಂದ್ರಗಳಿಗೆ ಬರಲಿದೆ. ಅಲ್ಲಿಂದ ನೇರವಾಗಿ ಒಕ್ಕೂಟಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಬಿಎಂಸಿ ಕೇಂದ್ರಗಳಿಂದ ಒಕ್ಕೂಟಕ್ಕೆ ಹಾಲು ತಲುಪಿಸಲು ಹಲವರಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದ ಕೆಲವು ಗುತ್ತಿಗೆದಾರರು ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ವಂಚಿಸಿ ಹಲವು ವರ್ಷಗಳಿಂದ ಹಾಲು ಕಳವು ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿತ್ತು. ಈ ಜಾಲ ಪತ್ತೆ ಹಚ್ಚಬೇಕೆಂದು ಒಕ್ಕೂಟದ ಅಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಕೆಲವು ಟ್ಯಾಂಕರ್ ಗಳನ್ನು ಪರಿಶೀಲಿಸಿದಾಗ ಹಾಲು ಕಳವು ಮಾಡಿ ಒಕ್ಕೂಟಕ್ಕೆ ವಂಚಿಸುತ್ತಿದ್ದ ರಹಸ್ಯ ಜಾಲ ಬೆಳಕಿಗೆ ಬಂದಿದೆ.
ಈ ಚಾಲಾಕಿ ಗ್ಯಾಂಗ್ ಟ್ಯಾಂಕರ್ ಒಳ ಭಾಗದಲ್ಲಿ ಎರಡೂವರೆ ಸಾವಿರ ಲೀಟರ್ ನೀರು ತುಂಬಿಕೊಳ್ಳುವಂತೆ ಪ್ಯತ್ಯೇಕವಾಗಿ ವಿನ್ಯಾಸ ಮಾಡಿಕೊಂಡಿದ್ದು, ಬಿಎಂಸಿ ಕೇಂದ್ರಗಳಿಗೆ ಹೋಗಿ ಹಾಲು ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿಂದ ಹೊರಡುತ್ತಿದ್ದಂತೆ ಮಾರ್ಗ ಮಧ್ಯೆ ಮತ್ತೊಂದು ಟ್ಯಾಂಕರ್ ಗೆ ಎರಡೂವರೆ ಸಾವಿರ ಲೀಟರ್ ಹಾಲು ಡಂಪ್ ಮಾಡಲಾಗುತ್ತಿತ್ತು. ಬಳಿಕ ಒಕ್ಕೂಟದಲ್ಲಿ ಹಾಲಿನ ಪರೀಕ್ಷೆ ನಡೆದ ಬಳಿಕ ಹಾಲಿನ ಜೊತೆಗೆ ನೀರು ಬರುವಂತೆ ಮಾಡಿ ಸುರಿಯುತ್ತಿದ್ದರು.
ಒಕ್ಕೂಟದ ಅಧ್ಯಕ್ಷ ರಾಮಚಂದ್ರು ನೀಡಿರುವ ದೂರಿನ ಮೇರೆಗೆ ತನಿಖೆ ಆರಂಭಿಸಿರುವ ಮದ್ದೂರು ಪೊಲೀಸರು, ಆರು ಟ್ಯಾಂಕರ್ ಗಳನ್ನು ವಶ ಪಡಿಸಿಕೊಂಢಿದ್ದಾರೆ. ಇನ್ನು ಉಸ್ತುವಾರಿ ಸಚಿವ ನಾರಾಯಣಗೌಡ ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಬಳಿಕ ಮಾತನಾಡಿದ ಅವ್ರು ಇದೇ ರೀತಿ ರಾಜ್ಯದ ಇತರೆ ಒಕ್ಕೂಟದಲ್ಲಿಯೂ ಹಾಲು ಕಳವು ನಡೆಯುತ್ತಿರುವಬಹುದೆಂದು ಶಂಕಿಸಿದ್ದಾರೆ. ಈ ಜಾಲದಲ್ಲಿ ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿ ಮುಖಂಡರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದ್ದು, ತನಿಖೆಯ ನಂತರವಷ್ಟೇ ಸತ್ಯ ಬಯಲಾಗಬೇಕಿದೆ.