ಸ್ಪೋರ್ಟ್ಸ್ ಹಾಸ್ಟೆಲ್ ಗೆ ಸಚಿವ ನಾರಾಯಣಗೌಡ ದಿಢೀರ್ ಭೇಟಿ, ಅಧಿಕಾರಿಗಳಿಗೆ ತರಾಟೆ

ಮೈಸೂರು :ಮೈಸೂರಿನ ಕ್ರೀಡಾ ಹಾಸ್ಟೆಲ್ ಗೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ದಿಢೀರ್ ಭೇಟಿ ನೀಡಿದರು. ಹಾಸ್ಟೇಲ್ ನಲ್ಲಿ ಸ್ವಚ್ಚತೆ ಸರಿಯಾಗಿ ಇರಬೇಕು, ಕೆಲ ಸಿಬ್ಬಂದಿಗಳು ಗೈರಾಗಿದ್ದಾರೆ. ಪ್ರತಿನಿತ್ಯವೂ ಹೀಗೆ ಮಾಡ್ತಿದ್ದಾರಾ.? ಮನಸ್ಸಿಗೆ ಬಂದಂತೆ ಕೆಲಸ ಮಾಡಿದ್ರೆ ಸುಮ್ಮನಿರಲ್ಲ ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಇರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ ಸಚಿವರು, ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಮಾತನಾಡಿ, ವ್ಯವಸ್ಥೆ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು. ಊಟ ತಿಂಡಿ ವ್ಯವಸ್ಥೆ ಜೊತೆಗೆ ಕ್ರೀಡಾ ತರಬೇತಿ ಬಗ್ಗೆಯೂ ವಿಚಾರಿಸಿದರು. ಊಟದ ಕೋಣೆಗೆ ತೆರಳಿ, ಪರಿಶೀಲಿಸಿದರು.
ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಬೇಕು, ಊಟ ವಸತಿಯಲ್ಲೂ ಯಾವುದೆ ಕೊರತೆ ಆಗಬಾರದು. ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ದ, ನಿಮ್ಮಿಂದ ಉತ್ತಮ ಕೆಲಸ ಆಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.