ಕಾರ ಹುಣ್ಣಿಮೆ ಸಂಭ್ರಮದಲ್ಲಿ ತಾಯಿ ಹಾಗೂ ಇಬ್ಬರು ಸೇರಿದಂತೆ ಮೂವರು ಬಾವಿಗೆ ಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ತುಮಕೂರು ತಾಲ್ಲೂಕಿನ ತುಳಸಿಪುರ ಗ್ರಾಮದ ಸಮೀಪದ ತಿರುಮಲಪಾಳ್ಯದಲ್ಲಿ ಸಂಭವಿಸಿದೆ.
ತಿರುಮಲಪಾಳ್ಯದ ವಾಸಿ ಕುಮಾರ್ ಎಂಬುವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕ (3) ಮೃತಪಟ್ಟ ದುರ್ದೈವಿಗಳು.
ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಕ್ಕಳನ್ನು ಕಾಪಾಡಲು ತಾಯಿ ಕೂಡ ಬಾವಿಗೆ ಧುಮುಕಿದ್ದು, ಮೂವರು ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಶವಗಳನ್ನು ಹೊರಗೆ ತೆಗೆದಿದ್ದಾರೆ.
ಇಂದು ಕಾರ ಪೌರ್ಣಿಮೆಯ ಪ್ರಯುಕ್ತ ತೋಟಕ್ಕೆ ಮೊಸರನ್ನ ಎಡೆ ಇಡಲೆಂದು ತಾಯಿ ಹಾಗೂ ಮಕ್ಕಳು ತೆರಳಿದ್ದು, ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಮಕ್ಕಳನ್ನು ರಕ್ಷಿಸಲೆಂದು ತಾಯಿ ಬಾವಿಗೆ ಹಾರಿದ್ದಾರೆ. ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಅದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 7.30ರ ಸಮಯ ಹೇಮಲತಾ ತನ್ನಿಬ್ಬರು ಮಕ್ಕಳೊಂದಿಗೆ ಕಾರ ಹುಣ್ಣಿಮೆ ಪ್ರಯುಕ್ತ ತುಳಸಿಪುರ ಗ್ರಾಮ ವ್ಯಾಪ್ತಿಯಲ್ಲಿನ ತಮ್ಮ ಅಡಿಕೆ ತೋಟಕ್ಕೆ ಪೂಜೆಗೆ ತೆರಳಿದ್ದರು. 9 ಗಂಟೆಯಾದರೂ ಮನೆಗೆ ವಾಪಸ್ ಬಾರದ ಕಾರಣ ಪತಿ ಕುಮಾರ್ ತೋಟಕ್ಕೆ ಹೋಗಿ ನೋಡಿದಾಗ, ಜಮೀನಿನಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕಂಡು ಬಂದಿವೆ. ಇನ್ನು ಮಗುವಿನ ಶವ ನೀರಿನಲ್ಲಿ ತೇಲುತ್ತಿರುವುದನ್ನ ನೋಡಿರುವ ಪಕ್ಕದ ಜಮೀನಿನ ಮಾಲೀಕರು ಕೋರಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್.ಪಿ ರಾಹುಲ್‌ಕುಮಾರ್ ಶಹಪೂರವಾಡ್, ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್ಐ ಹರೀಶ್‌ಕುಮಾರ್ ಭೇಟಿ ನೀಡಿದ್ದು, ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.