ಭಾರತ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಅವರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಲಾಗಿದೆ.
ನಿಯಮಬಾಹಿರವಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಆಡಳಿತ ನಡೆಸುತ್ತಿರುವ ಬಗ್ಗೆ ಸದಸ್ಯರು ನೀಡಿದ ದೂರು ಪ್ರಕರಣಗಳು ಇತ್ಯರ್ಥ ಆಗುವವರೆಗೂ ಅಜರುದ್ದೀನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಹೊರಗಿಡಲು ಸಂಸ್ಥೆಯ ಅಪೆಕ್ಸ್ ಕೌನ್ಸಿಲ್ ಸಭೆ ನಿರ್ಧರಿಸಿದ್ದು, ಸದಸ್ಯತ್ವವನ್ನೂ ರದ್ದುಗೊಳಿಸಲಾಗಿದೆ.
ಅಜರುದ್ದೀನ್ ಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂ ಕೌನ್ಸಿಲ್, ಅವರ ಹೆಚ್‌ಸಿಎ ಸದಸ್ಯತ್ವ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್ 27 2019 ರಂದು ಅಜರುದ್ದೀನ್ ಹೆಚ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹೆಚ್‌ಸಿಎಯ ಕಾರ್ಯ ಚಟುವಟಿಕೆಗಳಿಗೆ ತಡೆಯೊಡ್ಡಲು ಅಜರ್ ಪ್ರಯತ್ನಿಸಿದ್ದಾರೆ. ಅಜರ್ ದುಬೈನ ಖಾಸಗಿ ಕ್ರಿಕೆಟ್ ಕ್ಲಬ್ನ ಮುಖ್ಯಸ್ಥರಾಗಿದ್ದು, ಈ ಕ್ಲಬ್ ಟಿ20 ಯಲ್ಲಿ ಭಾಗವಹಿಸಿತ್ತು. ಆದರೆ, ಇದು ಬಿಸಿಸಿಐನಿಂದ ಮಾನ್ಯತೆ ಪಡೆದಿಲ್ಲ ಎಂಬ ಆರೋಪವನ್ನು ಹೆಚ್‌ಸಿಎ ಅಜರ್ ವಿರುದ್ಧ ಮಾಡಿದೆ.
ಹೈದರಾಬಾದ್ನ ದಿಲ್ಸುಖ್ ನಗರ ಕೆನರಾ ಬ್ಯಾಂಕ್ ಶಾಖೆಯಲ್ಲಿದ್ದ ಸಂಸ್ಥೆಯ ಖಾತೆಯ ವಹಿವಾಟುಗಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದ್ದಾರೆ. ಈ ಮೂಲಕ ಅಪೆಕ್ಸ್ ಕೌನ್ಸಿಲ್ನ ಹಣಕಾಸಿನ ವಹಿವಾಟುಗಳಿಗೆ ತಡೆಯೊಡ್ಡಲು ಪ್ರಯತ್ನಿಸಿದ್ದಾರೆ.