ಭಾರತದ ಮಧ್ಯಮ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡನೇ ಆವೃತ್ತಿಯ ಪಂದ್ಯಾವಳಿಯ ಮೊದಲ ಸುತ್ತಿನ ಸರಣಿಯ ಮೊದಲ ಪಂದ್ಯ ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಮಂಗಳವಾರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು.
ಇಂಗ್ಲೆಂಡ್ ತಂಡ ಚಹಾ ವಿರಾಮದ ನಂತರ ಮೊದಲ ಇನಿಂಗ್ಸ್ ನಲ್ಲಿ 139 ರನ್ ಗೆ 5 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದೆ. ಭಾರತದ ಮೊಹಮದ್ ಶಮಿ 3 ವಿಕೆಟ್ ಕಿತ್ತರೆ, ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ರೋರಿ ಬರ್ನ್ಸ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರೆ, ಡಾಮಿ ಸಿಬ್ಲೆ (18) ಮತ್ತು ಜಾಕ್ ಕ್ರಾವ್ಲೆ (27) ಬೇಗನೇ ನಿರ್ಗಮಿಸಿದರು. ನಾಯಕ ಜೋ ರೂಟ್ 98 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 57 ರನ್ ಬಾರಿಸಿ ತಂಡವನ್ನು ಮುನ್ನಡೆಸಿದರು.
ಭಾರತ ಈ ಪಂದ್ಯದಲ್ಲಿ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಅವರನ್ನು ಮಾತ್ರ ಪರಿಗಣಿಸಿದ್ದು, ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದೆ.