ಕಾಲುವೆಗೆ ಉರುಳಿದ ಬಸ್: 40 ಮಂದಿ ದುರ್ಮರಣ

ಭೋಪಾಲ್: ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿ ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿದೆ. ಈ ದುರ್ಘಟನೆಯಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಸಿಧಿಯಿಂದ 80 ಕಿ.ಮೀ. ದೂರದಲ್ಲಿರುವ ಸಾತ್ನಾ ಬಳಿ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಏಳಕ್ಕೂ ಅಧಿಕ ಜನರು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ. 20ಕ್ಕೂ ಅಧಿಕ ಪ್ರಯಾಣಿಕರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಪಘಾತಕ್ಕೊಳಗಾದ ಬಸ್ಸಿನಲ್ಲಿ 54 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಛುಯಾ ಕಣಿವೆಯ ಮೂಲಕ ಹೋಗಬೇಕಿದ್ದ ಬಸ್ ಟ್ರಾಫಿಕ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಮಾರ್ಗವನ್ನು ಬದಲಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ನಾಲೆಗೆ ಉರುಳಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ ಆಗಮಿಸಿ ಕ್ರೇನ್ ಸಹಾಯದಿಂದ ಬಸ್ನ್ನು ಮೇಲಕ್ಕೆತ್ತಿದೆ. ಬನ್ಸಾಗರ್ ಜಲಾಶಯದಿಂದ ಕಾಲುವೆಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ.