ಪ್ರಯಾಣಿಕರು ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲ ಮಾಡಿಕೊಡಲು ಕೆಲವೇ ದಿನಗಳ ಹಿಂದೆ ಆರಂಭಿಸಿದ್ದ ಹಗಲು ಹೊತ್ತು ಸಂಚರಿಸುವ ವಿಸ್ಟಾ ಡೋಮ್ ರೈಲು ಕೋಚ್ ಗಳ ಮೇಲೆ ಮಣ್ಣು ಕುಸಿದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಸೋಮವಾರ ವಿಸ್ಟಾಡೋಮ್ ರೈಲು ಪುತ್ತೂರು-ಕಬಕ-ಸುಬ್ರಹ್ಮಣ್ಯ ನಡುವಿನ ವೀರಮಂಗಲ ಎಂಬಲ್ಲಿ ರೈಲು ಹಳಿಗಳ ಮೇಲೆ ಮಣ್ಣು ಕುಸಿದು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ವಿಸ್ಟಾಡೋಮ್ ಕೋಚ್ ಮೇಲೆ ಮಣ್ಣು ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿಯದೇ ಇದ್ದಿದ್ದರಿಂದ ರೈಲಿಗೆ ಹೆಚ್ಚಿನ ಹಾನಿಯಾಗಿಲ್ಲ.
ವಿಸ್ಟಾಡೋಮ್ ರೈಲು ಬಹುತೇಕ ಗಾಜಿನಿಂದ ನಿರ್ಮಾಣಗೊಂಡಿದ್ದು, ದೊಡ್ಡ ಬಂಡೆ ಅಥವಾ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಪ್ರಯಾಣಿಕರು ಯಾವುದೇ ಅಪಾಯ ಆಗದೇ ಸುರಕ್ಷಿತವಾಗಿದ್ದರೂ ದಟ್ಟ ಕಾಡಿನ ನಡುವೆ ಸಿಲುಕಿದ್ದು, ರೈಲು ಸಂಚಾರ ಪುನರಾರಂಭಕ್ಕೆ ಹಾತೊರೆಯುತ್ತಿದ್ದಾರೆ.
ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾಏಕಿ ಧರೆ ಕುಸಿದಿದ್ದು, ಮಣ್ಣು ರೈಲಿನ ಮುಂಭಾಗಕ್ಕೆ ಕುಸಿದಿದ್ದು ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಹಳಿಯಲ್ಲಿ ಬಾಕಿಯಾಗಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.