ಬೆಳಗಾವಿ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಬಯಸಿದ್ದಲ್ಲಿ ಗೋಕಾಕ್ ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ ಎಂದಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿಯಿಂದ ಸನ್ಮಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಸರ್ಕಾರವನ್ನು ಬಿಳಿಸಿದವರಿಗೆ ಗ್ರಾ.ಪಂ ಯಾವ ಲೆಕ್ಕ. ಎಂಎಲ್ಎಗಳನ್ನೆ ಎಸ್ಕೆಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ಅವರು ಗೋಕಾಕದಲ್ಲಿ ಸ್ಪರ್ಧಿಸುವುದಾದರೆ ಮೋಸ್ಟ್ ವೆಲ್‌ಕಮ್. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ. ಬರಲಿ, ಬಹಳ ಸಂತೋಷ. ಯಾರು ಹೇಗೆ ಎನ್ನುವುದು ಜನರಿಗೆ ಗೊತ್ತಿದೆ’ ಎಂದರು.
ನಾನು ಜಿಲ್ಲಾ ಉಸ್ತುವಾರಿ ಸಚಿವ. ಎಲ್ಲರ ಹಿತ ಕಾಯುವುದು ನನ್ನ ಜವಾಬ್ದಾರಿ. ಇದರ ಜೊತೆಯಲ್ಲೇ, ಯಾವ ಕ್ಷೇತ್ರದಲ್ಲಿ ಬಿಜೆಪಿ ಇಲ್ಲವೋ ಅಲ್ಲಿ ಗೆಲ್ಲಿಸಿಕೊಂಡು ಬರುವ ಕರ್ತವ್ಯವೂ ನನ್ನದಾಗಿದೆ. ಹೀಗಾಗಿ, ಗ್ರಾಮೀಣ ಸೇರಿದಂತೆ ಎಲ್ಲ ಕಡೆಗೂ ಗಮನ ಕೊಡಬೇಕಾಗುತ್ತದೆ. ಆದರೆ, ಹಸ್ತಕ್ಷೇಪ ಮಾಡುತ್ತಿಲ್ಲ. ಜನರೇ ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.
ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿದ್ದೇಕೆ ಎಂಬ ಬಗ್ಗೆ ಅವರ ಗಾಡ್‌ಫಾದರ್ ಅನ್ನೇ ಕೇಳಿದರೆ ಒಳ್ಳೆಯದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟರು.