ರಾಜಕೀಯವಾಗಿ ನನ್ನ ತಪ್ಪು ಕಂಡು ಹಿಡಿಯಲು ಆಗದ ಕಾರಣ ನನ್ನ ಫೋನ್ ಟ್ಯಾಪ್ ಮಾಡುವ ಮೂಲಕ ನನ್ನನ್ನು ಯುವರಾಜ್ ಸ್ವಾಮೀಜಿ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಬೆಳಗವಣಿಗೆ ನಡೀತಾ ಇದೆ. ಈ ಬಗ್ಗೆ ಜನ ಪೋನ್ ಮಾಡಿ ಕೇಳ್ತಾ ಇರ್ತಾರೆ. ನಂಗೆ ಕಾಲ್ ರಿಸೀವ್ ಮಾಡೋಕೆ ಆಗವದರಿಗೆ ವಾಪಾಸ್ ಕಾಲ್ ಮಾಡ್ತೇನೆ. ಅದೇ ರೀತಿ ಒಬ್ಬರಿಗೆ ಕಾಲ್ ಮಾಡಿದಾಗ ಯುವರಾಜ್ ಸ್ವಾಮಿದು ಎಂದು ತಿಳಿಯಿತು ಎಂದರು.
ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ನಾನು ಕರೆ ಮಾಡಿದ ನಂತರ ಮತ್ತೆ ಅವರೇ ಕಾಲ್ ಮಾಡಿದ್ದರು. ನನ್ನನ್ನು ಅನಾವಶ್ಯಕವಾಗಿ ಜೈಲಿಗೆ ಹಾಕಿದರು. ಆಸ್ಪತ್ರೆಯಲ್ಲಿ ಇದ್ದೇನೆ ಅಂತ ಅಂದರು. ನಂಗೆ ಅನಿಸುತ್ತಿರುವುದು ಏನೆಂದರೆ ಈ ಕರೆಗಳ ಹಿಂದೆ ದೊಡ್ಡ ಪಿತೂರಿ ಇದೆ ಅಂತ. ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ನನ್ನಲ್ಲೂ ಯಾವ ರಾಜಕೀಯ ತಪ್ಪು ಕಂಡು ಹಿಡಿಯೋಕೆ ಆಗಿಲ್ಲ. ಹಾಗಾಗಿ ಇಂಥಹ ವಿಚಾರದಲ್ಲಿ ನನ್ನನ್ನು ಸಿಕ್ಕಿಹಾಕಿಕೊಳ್ಳಿಸಬೇಕೆಂದು ಯಾವುದೋ ದೊಡ್ಡ ಕಾಣದ ಕೈ ಕೆಲಸ ಮಾಡ್ತಾ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ನನ್ನ ಪೋನ್ ಟ್ಯಾಪ್ ಆಗುತ್ತಿದೆ. ಈ ಬಗ್ಗೆ ಸ್ಪೀಕರ್, ಗೃಹ ಸಚಿವರು ಹಾಗೂ ಡಿಜಿಗೂ ದೂರು ನೀಡಿದ್ದೇನೆ. ಯುವರಾಜ್ ಸ್ವಾಮಿ ಯಾರು ಅಂತ ಗೊತ್ತಿಲ್ಲ. ಜೈಲಿನಲ್ಲಿ ಇರೋ ಮನುಷ್ಯ ದೂರವಾಣಿ ಕರೆ ಮಾಡಲು ಹೇಗೆ ಸಾಧ್ಯ? ನನ್ನ ಪರಿಚಯ ಇಲ್ಲದವರು ನಂಗೆ ಪೋನ್ ಮಾಡ್ತಾರೆ ಅಂದರೆ ಅವರು ನನ್ನನ್ನು ಸಿಕ್ಕಿಹಾಕಿಸಿಕೊಳ್ಳಬೇಕು ಅಂತ ಅಲ್ಲವೇ? ಎಂದು ಅವರು ಪ್ರಶ್ನಿಸಿದರು.