ಮಯನ್ಮಾರ್ ರಾಜಕೀಯ ಬೆಳವಣಿಗೆ: ಅಲ್ಲಿನ ಭಾರತೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ

ನವದೆಹಲಿ: ಮಯನ್ಮಾರ್ ನಲ್ಲಿ ನಿನ್ನೆ ನಡೆದ ಹಠಾತ್ ರಾಜಕೀಯ ಬೆಳವಣಿಗೆಗಳ ನಂತರ ಅಲ್ಲಿರುವ ಭಾರತೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಯಾಂಗೂನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿ ನೆಲೆಸಿರುವ ಭಾರತೀಯರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ. ಮಯನ್ಮಾರ್ ನಲ್ಲಿ ಸುಮಾರು 7ಸಾವಿರ ಭಾರತೀಯರು ನೆಲೆಸಿದ್ದಾರೆ.
ನಿನ್ನೆ ನಡೆದ ದಿಢೀರ್ ಕಾರ್ಯಾಚರಣೆಯಲ್ಲಿ, ಅಲ್ಲಿನ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿರುವ ಅಲ್ಲಿನ ಮಿಲಿಟರಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದಿದೆ. ಆಂಗ್ ಸಾನ್ ಸೂಕಿ ಸೇರಿದಂತೆ ಮತ್ತಿತರ ನಾಯಕರನ್ನು ಬಂಧಿಸಿದ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಮಯನ್ಮಾರ್ ನ ಇತ್ತೀಚಿನ ಬೆಳವಣಿಗೆಗಳ ದೃಷ್ಟಿಯಿಂದ, ಎಲ್ಲ ಭಾರತೀಯ ನಾಗರಿಕರು ಅನಗತ್ಯ ಪ್ರಯಾಣ ಕೈಬಿಡುವುದಲ್ಲದೇ, ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬಹುದು ರಾಯಭಾರ ಕಚೇರಿ ಹೇಳಿದೆ. ಈ ಬೆಳವಣಿಗೆಗೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು, ದೇಶದಲ್ಲಿ ಕಾನೂನು ನಿಯಮ ಮತ್ತು ಪ್ರಜಾಪ್ರಭುತ್ವ ಎತ್ತಿಹಿಡಿಯಬೇಕು ಎಂದು ಹೇಳಿದೆ.