ಬೀದಿ ನಾಯಿಗೆ ಲೈಂಗಿಕ ಕಿರುಕುಳ: ವಿಡಿಯೋದಲ್ಲಿ ಕಾಮುಕನ ಕೃತ್ಯ ಸೆರೆ
ಮೈಸೂರು: ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ಪೈಶಾಚಿಕ ಕೃತ್ಯ ಎಸಗಿದ ಆರೋಪದಲ್ಲಿ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ.
ಯುವಕನ ವಿರುದ್ಧ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಬಿ. ಹರೀಶ್ ಅವರು ದೂರು ನೀಡಿದ್ದರು. ದುಷ್ಕೃತ್ಯ ಎಸಗಿರುವ ವಿಕೃತ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 1860 (ಯು /ಎಸ್ -377 ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಮತ್ತು 1960 ( ಯು/ಇಎಸ್-11(1)(ಎ)) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ರಸ್ತೆ ಬಳಿ ಫೆ.11ರ ರಾತ್ರಿ ವೇಳೆ ವ್ಯಕ್ತಿಯೊಬ್ಬ ಹೆಣ್ಣು ನಾಯಿಯ ಮೇಲೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡುವುದನ್ನು ದಾರಿಹೋಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ದುಷ್ಕೃತ್ಯದ ವಿಡಿಯೋವನ್ನು ಈ ಬಳಿಕ ವೈರಲ್ ಮಾಡಿದ್ದರು. ವಿಡಿಯೋದಲ್ಲಿನ ದೃಶ್ಯಗಳನ್ನು ಆಧರಿಸಿ ಪಿಎಫ್ಎ ಅಧಿಕಾರಿ ಕೆ.ಬಿ. ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಡಿಯೋ ಆಧರಿಸಿ ಕೃತ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಇಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಾಯಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆಯ ನಂತರವಷ್ಟೇ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸತ್ಯಾಸತ್ಯತೆ ತಿಳಿಯಲಿದೆ