ಮಂಗಳ ಗ್ರಹವನ್ನು ಯಶಸ್ವಿಯಾಗಿ ತಲುಪಿದ ನಾಸಾದ ರೋವರ್: ಅಭೂತಪೂರ್ವ ಯೋಜನೆಯ ಹಿಂದಿದ್ದಾರೆ ಭಾರತ ಮೂಲದ ಮಹಿಳೆ
ವಾಷಿಂಗ್ಟನ್: ನಾಸಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ರೋವರ್, 203 ದಿನಗಳ ಸುದೀರ್ಘ ಪ್ರಯಾಣ ಮುಗಿಸಿ ಮಂಗಳ ಗ್ರಹವನ್ನು ತಲುಪಿದೆ. ಕಳೆದ ಜುಲೈ 30ರಂದು ಕೇಪ್ ಕ್ಯಾನವರೆಲ್ ಬಾಹ್ಯಾಕಾಶ ಕೇಂದ್ರದಿಂದ ‘ಪರ್ಸೆವರೆನ್ಸ್ ರೋವರ್‘ ಹೊತ್ತ ರಾಕೆಟ್ನ್ನು ಉಡಾಯಿಸಲಾಗಿತ್ತು. 472 ಮಿಲಿಯನ್ ಕಿ.ಮೀ. ದೂರ ಕ್ರಮಿಸಿರುವ ರೋವರ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಸೇರಿದೆ. ‘ಪರ್ಸೆವರೆನ್ಸ್ ರೋವರ್’ ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ. ಅಲ್ಲದೇ, ಮಂಗಳ ವಾತಾವರಣದ ಬಗ್ಗೆ ಅಧ್ಯಯನ ಮಾಡಲು ಜೆಜೆರೋ ಸರೋವರ ಮತ್ತು ಡೆಲ್ಟಾ ನದಿಯ ಬಂಡೆ ಮತ್ತು ಕೆಸರನ್ನು ಸಂಶೋಧಿಸಲಿದೆ.

ಈ ಅಭೂತಪೂರ್ವ ಯೋಜನೆಯ ನೇತೃತ್ವ ವಹಿಸಿದ್ದು ಭಾರತ ಮೂಲಕ ಅಮೆರಿಕನ್ ವಿಜ್ಞಾನಿ ಡಾ.ಸ್ವಾತಿ ಮೋಹನ್. ರೋವರ್ ಯಶಸ್ವಿಯಾಗಿ ಮಂಗಳನನ್ನು ಸ್ಪರ್ಶಿಸಿದೆ ಎಂದು ಕಾರ್ಯಾಚರಣೆಯ ಮುಖ್ಯಸ್ಥೆ ಸ್ವಾತಿ ಮೋಹನ್ ಅಧಿಕೃತವಾಗಿ ಹೇಳಿದ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಸಂತಸ ಮುಗಿಲು ಮುಟ್ಟಿತು. ಈ ಯೋಜನೆ ನಿಗದಿತ ಸಮಯಕ್ಕಿಂತ 11 ನಿಮಿಷ ಮೊದಲೇ ಪೂರ್ಣಗೊಂಡಿದೆ. ಈ ನೌಕೆ ಮುಂದಿನ ಏಳು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಓಡಾಟ ನಡೆಸಲಿದೆ. ಅಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು 2030ರ ವೇಳೆಗೆ ಭೂಮಿಗೆ ರವಾನಿಸಿಲಿದೆ.
ಇನ್ನು, ಈ ಯೋಜನೆಯ ಯಶಸ್ಸನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೊಂಡಾಡಿದ್ದಾರೆ. ಒಂದು ಕಾರಿನ ಗಾತ್ರದಷ್ಟಿರುವ ರೋವರ್ ನೌಕೆಯ ತೂಕ ಸುಮಾರು 1 ಟನ್. ಈ ನೌಕೆಯಲ್ಲಿ ಏಳು ಅಡಿ ಎತ್ತರದ ರೊಬೊಟಿಕ್ ಕ್ಯಾಮೆರಾ, ಮೈಕ್ರೋಫೋನ್ಗಳು ಸೇರಿದಂತೆ ಸಂಶೋಧನೆಗೆ ಅನುಕೂಲವಾಗುವಂಥ ಕೆಲವು ಸಾಧನೆಗಳನ್ನು ಅಳವಡಿಸಲಾಗಿದೆ.
ಕಳೆದ ಒಂದು ವಾರದಲ್ಲಿ ನಾಸಾದ ರೋವರ್ ಸೇರಿದಂತೆ ಒಟ್ಟು ಮೂರು ನೌಕೆಗಳು ಮಂಗಳನ ಅಂಗಳಕ್ಕೆ ಲಗ್ಗೆ ಇಟ್ಟಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಚೀನಾದ ಎರಡು ನೌಕೆಗಳು ಮಂಗಳ ಗ್ರಹವನ್ನು ಕಳೆದ ವಾರದಲ್ಲಿ ಸ್ಪರ್ಶಿಸಿದ್ದವು. ರೋವರ್ ಮಂಗಳ ಗ್ರಹದಲ್ಲಿ ಇಳಿದಿರುವ ನಾಸಾದ ಒಂಭತ್ತನೇ ಬಾಹ್ಯಾಕಾಶ ನೌಕೆಯಾಗಿದೆ.