ನವದೆಹಲಿ: ನಿನ್ನೆ ಸಂಜೆ ರಾಷ್ಟ್ರ ರಾಜಧಾನಿ ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಲಘು ಸ್ಫೋಟ ಸಂಭವಿಸಿದೆ. ಈ ಬಗ್ಗೆ ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರಿಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ಈ ಸ್ಫೋಟವನ್ನು ನಡೆಸಲಾಗಿದ್ದು, ಇದೀಗ ಪೊಲೀಸರಿಗೆ ಈ ಸಂಬಂಧ ಸಿಸಿಟಿವಿ ಸಾಕ್ಷ್ಯಗಳು ಲಭ್ಯವಾಗಿವೆ.
ರಾಯಭಾರಿ ಕಚೇರಿಯ ಬಳಿಯ ಪಾದಚಾರಿ ಮಾರ್ಗದ ಬಳಿ ಸ್ಫೋಟ ಸಂಭವಿಸಿದ್ದು ಸ್ಥಳದಲ್ಲಿದ್ದ ಕೆಲವು ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟವನ್ನು ನಾವು ಗಂಭೀರವಾಗಿ ಪರಿಗಣಿಸಿ ಈಗಾಗಲೇ ತನಿಖೆಯನ್ನು ಆರಂಭಿಸಿದ್ದೇವೆ. ಇಸ್ರೇಲ್ ರಾಜತಾಂತ್ರಿಕರ ಭದ್ರತೆ ನಮ್ಮ ಜವಾಬ್ದಾರಿ. ಈ ಸಂಬಂಧ ಇಸ್ರೇಲ್ ವಿದೇಶಾಂಗ ಸಚಿವರೊಡನೆ ದೂರವಾಣಿ ಮೂಲಕ ಈಗಾಗಲೇ ಸಮಾಲೋಚನೆ ನಡೆಸಿದ್ದೇನೆ. ಇಸ್ರೇಲ್ ರಾಯಭಾರ ಕಚೇರಿಗೆ ಸಂಪೂರ್ಣ ರಕ್ಷಣೆ ನೀಡುವ ಹೊಣೆ ನಮ್ಮದು ಎಂದು ಸಚಿವ ಜೈಶಂಕರ್ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿಯಿಂದ ಕೆಲವೇ ಕಿ.ಮೀ. ದೂರದಲ್ಲಿ ಬೀಟಿಂಗ್ ರೀಟ್ರೀಟ್ ಸಂಭ್ರಮಾಚರಣೆ ನಡೆಯುತ್ತಿತ್ತು. ಇದೇ ವೇಳೆಯಲ್ಲಿ ಸ್ಫೋಟ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸ್ಫೋಟದ ಬಳಿಕ ನವದೆಹಲಿಯಾದ್ಯಂತ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಲ್ಲದೇ, ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿಯೂ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ.