ನವದೆಹಲಿ ರೈತ ಹೋರಾಟ: ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆಯಿಂದ ಸರಣಿ ಟ್ವೀಟ್

ವಾಷಿಂಗ್ಟನ್: ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ಈಗಾಗಲೇ ಅಂತಾರಾಷ್ಟ್ರೀಯ ಖ್ಯಾತಿಯ ಪರ-ವಿರೋಧದ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಈಗ ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ಮೂಲತಃ ವಕೀಲೆ. ತಮ್ಮ ಟ್ವೀಟ್ ನಲ್ಲಿ ಇದು ಕೇವಲ ಕೃಷಿ ನೀತಿ ವಿಚಾರವಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ, ಪೊಲೀಸ್ ಹಿಂಸೆ, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಗೆ ಸಂಬಂಧಿಸಿದ್ದು, ನಿಮ್ಮ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ. ಇವೆಲ್ಲವೂ ನಮ್ಮ ಸಮಸ್ಯೆಗಳೇ ಎಂದು ಹೇಳಿದ್ದಾರೆ.
ಇನ್ನು ಮತ್ತೊಂದು ಟ್ವೀಟ್ ನಲ್ಲಿ ಸಿಂಘು ಗಡಿಯಲ್ಲಿ ಬಂಧಿಕ್ಕೀಡಾಗಿದ್ದ ನೊದೀಪ್ ಕೌರ್ ಎಂಬ ದಲಿತ ಕಾರ್ಯಕರ್ತೆಗೆ ಪೊಲೀಸರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಆಕೆಯನ್ನು 20 ದಿನಗಳಿಂದ ಕೋರ್ಟ್ ಗೂ ಹಾಜರುಪಡಿಸದೇ ಹಿಂಸೆ ನೀಡಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ದಮನಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇನ್ನು ಕೆನಡಾದಲ್ಲಿ ಖಲಿಸ್ತಾನಿಗಳ ವಿರುದ್ಧ ಭಾರತದ ಪರವಾಗಿ ಸಿಖ್ ಸಮುದಾಯ ತಿರಂಗ ರ್ಯಾಲಿ ನಡೆಸಲಿದೆ. ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೆನಡಾದಲ್ಲಿ ಖಲಿಸ್ತಾನಿ ಸಂಘಟನೆಗಳು ಹಲವು ಪ್ರತಿಭಟನೆಗಳನ್ನು ಆಯೋಜಿಸಿವೆ.