ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ಸುಳ್ಳು ಸೃಷ್ಟಿಸುತ್ತಾರೆ. ಅಲ್ಲದೇ, ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್-2021 ಮೇಲಿನ ಚರ್ಚೆಗೆ ಲೋಕಸಭೆಯಲ್ಲಿಂದು ಉತ್ತರಿಸುವ ವೇಳೆ ಸಚಿವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ಸುಳ್ಳು ಸಂಗತಿಗಳನ್ನು ಸೃಷ್ಟಿಸುತ್ತಾ ಹೋಗುತ್ತಾರೆ, ಸರ್ಕಾರದ ಮೇಲೆ ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ಕೇಳುವ ತಾಳ್ಮೆ ಮಾತ್ರ ಅವರಿಗಿಲ್ಲ ಎಂದು ಟೀಕಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸದೀಯ ವ್ಯವಸ್ಥೆ ಮೇಲೆ ಕಾಂಗ್ರೆಸ್ ನಾಯಕರಿಗೆ ವಿಶ್ವಾಸ, ನಂಬಿಕೆ ಸಂಪೂರ್ಣ ಹೋಗಿದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಗಳಿಂದ ತಿಳಿಯುತ್ತದೆ. ಸದನದಲ್ಲಿ ರಾಹುಲ್ ಗಾಂಧಿಯವರು 10 ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವುಗಳನ್ನು ಅವರು ಪ್ರಸ್ತಾಪವೇ ಮಾಡಲಿಲ್ಲ. ಬಜೆಟ್ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ ಎಂದಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್ ಘಡ್ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ರೈತರ ಕೃಷಿಸಾಲ ಮನ್ನಾ ಮಾಡಲಿಲ್ಲ ಏಕೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಉತ್ತರ ನೀಡಲಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿಪಾದಿಸಿದ್ದ ಎಪಿಎಂಸಿ ಸುಧಾರಣೆಗಳ ಬಗ್ಗೆ ಕೂಡ ರಾಹುಲ್ ಗಾಂಧಿಯವರು ಮಾತನಾಡಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ನಾವಿಬ್ಬರು, ಹಮ್ ದೋ, ಹಮಾರೇ ದೋ ಎಂಬುದರ ಬಗ್ಗೆ ಮಾತ್ರ ಚಿಂತೆಯಾಗಿದೆ. ನಮ್ಮ ಸರ್ಕಾರವನ್ನು ಟೀಕಿಸುವ ಮೊದಲು ರೈತರಿಂದ ಅಲ್ಪಮೊತಕ್ಕೆ ಖರೀದಿಸಿದ ಜಮೀನನ್ನು ಮೊದಲು ಹಿಂತಿರುಗಿಸಿ ಎಂದು ಸದನದಲ್ಲಿ ನಿರ್ಮಲಾ ಸೀತಾರಾಮನ್ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದರು.