ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಹೆರುವ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ಜನ ಸಾಮಾನ್ಯರು ಕೊರೋನಾ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಅರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು. ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಬೇಕಾಗಬಹುದು ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ನಿನ್ನೆ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಜನಸಾಮಾನ್ಯರಲ್ಲಿ ಲಾಕ್ಡೌನ್ ಭೀತಿ ಎದುರಾಗಿದೆ. ಆದರೆ ರಾಜ್ಯದಲ್ಲಿ ಈಗ ಯಾವುದೇ ಲಾಕ್ ಡೌನ್ ಇಲ್ಲ ಎಂದು ಸಚಿವರು ಹೇಳಿದರು.
ನಾವು ಸಂದಿಗ್ಧ ಸ್ಥಿತಿಗೆ ಸಿಲುಕಿದ್ದೇವೆ. ಲಾಕ್ಡೌನ್ನಿಂದಾಗಿ ಆರ್ಥಿಕ ಸ್ಥಿತಿ ಬಿಗಡಾಯಿಸಿತ್ತು. ಹಾಗಾಗಿ ಲಾಕ್ ಡೌನ್ ಹಿಂಪಡೆದು ವಿನಾಯಿತಿ ನೀಡಬೇಕಾಯಿತು. ಆದರೆ ಜನರು ಎಚ್ಚರ ತಪ್ಪಬಾರದು. ಜನರು ಈ ಸಂಕಷ್ಟ ಸ್ಥಿತಿಯನ್ನ ಅರ್ಥ ಮಾಡಿಕೊಂಡು ತಮ್ಮ ನಡವಳಿಕೆಗಳನ್ನ ಬದಲಾಯಿಸಿಕೊಳ್ಳಬೇಕು. ಕೋವಿಡ್ ನಿಯಮಗಳನ್ನ ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಅನುಸರಿಸಬೇಕು. ಮಾರ್ಚ್ನಿಂದ ಎಲ್ಲ ಜನಸಾಮಾನ್ಯರಿಗೂ ಲಸಿಕೆ ಸಿಗುತ್ತದೆ. ಅಲ್ಲಿಯವರೆಗಾದರೂ ಜನರು ಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದರು.
ಕಳೆದ ವಾರದಿಂದ ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಲೇ ಇದೆ. ಕೇರಳದಲ್ಲಿ 5,405 ಪ್ರಕರಣ ನಿನ್ನೆ ಒಂದೇ ದಿನ ದಾಖಲಾಗಿದೆ. ಆ ರಾಜ್ಯದಲ್ಲಿ 60 ಸಾವಿರ ಸಕ್ರಿಯೆ ಪ್ರಕರಣಗಳು ಇವೆ. ಅಲ್ಲಿ ಪ್ರತೀ ದಿನ 15 ಮಂದಿ ಸಾವನ್ನಪ್ಪುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6,112 ಪ್ರಕರಣಗಳು ದಾಖಲಾಗಿದ್ದು 44 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕಿದೆ ಎಂದರು.
ಮಹಾರಾಷ್ಟ್ರ ಮತ್ತು ಕೇರಳದ ಗಡಿಭಾಗದಲ್ಲಿ ರಾಜ್ಯದ 10 ಜಿಲ್ಲೆಗಳಿವೆ. ಬೆಳಗಾವಿ, ವಿಜಯಪುರ, ಮೈಸೂರು, ಚಾಮರಾಜನಗರ, ಮಂಗಳೂರು, ಉಡುಪಿ ಜಿಲ್ಲೆಗಳು ಗಡಿಭಾಗದಲ್ಲಿದ್ದು ಅಲ್ಲಿ ಹೆಚ್ಚಿನ ನಿಗಾ ವಹಿಸಿದ್ದೇವೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ. ಅಲ್ಲಿಂದ ಬರುವವರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ಧಾರೆ.