ತುಮಕೂರಿನ ಜಕ್ಕೇನಹಳ್ಳಿ ಬಳಿಯ ಎಂ. ಗೊಲ್ಲಹಳ್ಳಿ ಗ್ರಾಮದ ಹೊರವಲಯದ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯದ ಬಳಿ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಹಿಳೆಯ ಕೊಲೆಯಾದ 15 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯ ಕಂಡು ಬಂದಿವೆ. ಆದ್ದರಿಂದ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದೇವಾಲಯದ ಬಳಿ ಕುರಿಗಾಹಿಗಳು ಕುರಿ ಮೇಯಿಸಲು ಹೋದಾಗ ದುರ್ವಾಸನೆ ಬಂದಿದ್ದು, ದೇವಾಲಯದ ಅಕ್ಕಪಕ್ಕ ಎಲ್ಲ ಹುಡುಕಾಡಿದಾಗ ಮೃತದೇಹ ಸಂಪೂರ್ಣ ಗುರುತು ಸಿಗದಂತಹ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಕುರಿಗಾಹಿಗಳು ದೇವಾಲಯದ ಬಳಿ ಶವ ಬಿದ್ದಿರುವ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗಾಬರಿಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೆ ಈ ಮಹಿಳೆಯ ಸಾವಿನ ರಹಸ್ಯ ಬಹಿರಂಗಗೊಳ್ಳಬೇಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಶವ ಪರೀಕ್ಷೆಯ ನಂತರ ತಿಳಿಯಲಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖಾ ಕಾರ್ಯ ಕೈಗೊಂಡಿದ್ದಾರೆ.