ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ “ ಆತ್ಮ ಬರ್ಬಾದ್’ (ವಿನಾಶ) ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕೊರೋನಾ ಪಿಡುಗು, ಉದ್ಯೋಗ ನಷ್ಟ, ಕುಸಿದ ಆರ್ಥಿಕತೆಯಿಂದ ಹೈರಾಣಾಗಿರುವ ಜನರಿಗೆ ಈ ಬಾರಿ ಬಜೆಟ್ ಚೇತರಿಕೆ ದಾರಿ ಮಾಡಿಕೊಡುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಇದು ಆತ್ಮ ಬರ್ಬಾದ್ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
ಹೊಸದಾಗಿ ಕೃಷಿ ಸೆಸ್‌ಗಳನ್ನು ವಿಧಿಸಿದ್ದಾರೆ. ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆಗೂ ಕ್ರಮವಹಿಸಿಲ್ಲ. ರೈತರ ಕಲ್ಯಾಣಕ್ಕೆ ಯಾವುದೇ ಯೋಜನೆಗಳಿಲ್ಲ ಎಂದು ಬೇಸರಿಸಿದ್ದಾರೆ. ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಪ್ರಮಾಣ ಶೇ. 74ಕ್ಕೆ ಏರಿಸಲಾಗಿದೆ. ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಾಗಿದೆ. ಈ ಎಲ್ಲ ಕ್ರಮಗಳು ಮತ್ತೆ ಹಣದುಬ್ಬರಕ್ಕೆ ಕಾರಣವಾಗಲಿವೆ ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಸಂಸದರಾಗಿದ್ದರೂ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೆಟ್ರೋ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್ ಗೆ ನೀಡಿರುವ ಅನುದಾನ ಹೊಸದೇನಲ್ಲ. ಉಳಿದಂತೆ ಹಣಕಾಸು ಸಚಿವರು ಒಮ್ಮೆಯೂ ಕರ್ನಾಟಕದ ಹೆಸರನ್ನೂ ಕೂಡಾ ಎತ್ತಿಲ್ಲ. ಕೊರೋನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್ನಿಂದ ಸಿಕ್ಕಿಲ್ಲ ಎಂದರು.
ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು. ವಿತ್ತೀಯ ಕೊರತೆ ಶೇ. 3.5ಕ್ಕೆ ತರುವುದಾಗಿ ಹೇಳಿದ್ದರು. ಈಗ ಶೇ. 9.7ಕ್ಕೆ ಏರಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾಗುತ್ತದೆ. ನನ್ನ ಪ್ರಕಾರ ವಿತ್ತೀಯ ಕೊರತೆ ಶೇ.14-15 ಇದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಿಡಿಪಿ ಬೆಳವಣಿಗೆ ಕುಸಿಯುತ್ತಲೇ ಇದೆ. ಡಾ. ಮನಮೋಹನಸಿಂಗ್ ಅವರ ಅವಧಿಯಲ್ಲಿ ಇದ್ದಿದುಕ್ಕಿಂತ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಈ ವರ್ಷ ಕೊರೋನಾ ಸಂಕಷ್ಟ ಎದುರಾಗಿತ್ತು. ಆದರೆ, ಕಳೆದ ವರ್ಷ ಏನಾಗಿತ್ತು. ನಿರುದ್ಯೋಗ ಪ್ರಮಾಣ ನಗರದಲ್ಲಿ ಶೇ.9.2. ಇದರಿಂದ ಯುವಕರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ. ಅವರು ಪಕೋಡಾ ಮಾರಲು ಹೋಗಬೇಕಾಗುತ್ತದೆ. ಈ ವರ್ಷ ಜಿಡಿಪಿ ಬೆಳವಣಿಗೆ ಶೇ. 7.7 ಆಗಿದೆ. 2020-2021ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು ಶೇ. 11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ನೀಡದೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ವಿವರಗಳನ್ನು ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು.ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 80 ಕೋಟಿ ಮಂದಿಗೆ ಅಂದರೆ ಶೇ. 80ರಷ್ಟು ಮಂದಿಗೆ ಪಡಿತರ ಚೀಟಿ ಮೂಲಕ ಆಹಾರ ಧಾನ್ಯ ನೀಡಲಾಗುತ್ತಿದೆ. ಶಾಂತಕುಮಾರ್ ಅವರ ಸಮಿತಿ ವರದಿ ಜಾರಿಗೆ ತಂದರೆ ಶೇ.20ರಷ್ಟು ಮಂದಿ ಮಾತ್ರ ಪಡಿತರ ಮೂಲಕ ಆಹಾರ ಧಾನ್ಯ ಪಡೆಯಲು ಅರ್ಹರಾಗುತ್ತಾರೆ ಎಂದು ತಿಳಿಸಿದರು.